ಶೌರ್ಯ, ತ್ಯಾಗ ಮತ್ತು ನಂಬಿಕೆಯ ಪ್ರತೀಕ ಪೊಲೀಸರ ಕರ್ತವ್ಯ : ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಸಲೀಂ ಪಾಶಾ ಅಭಿಮತ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ(ಹೊಸಪೇಟೆ).
ಶೌರ್ಯ, ತ್ಯಾಗ ಮತ್ತು ಸಾರ್ವಜನಿಕರು ಅವರ ಮೇಲಿಟ್ಟಿರುವ ನಂಬಿಕೆ ಪ್ರತೀಕ ಪೊಲೀಸರ ಕರ್ತವ್ಯವಾಗಿದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶಾ ಅಭಿಮತ ವ್ಯಕ್ತಪಡಿಸಿದರು.
ಹೊಸಪೇಟೆ ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಕಾಯ್ದೆಯನ್ನು 1963ರಲ್ಲಿ ಅಂಗೀಕರಿಸಿ, 1965 ಏಪ್ರಿಲ್ 2 ರಂದು ಜಾರಿಗೆ ತರಲಾಯಿತು. ಈ ಕಾಯ್ದೆಯು ಇಲಾಖೆಗೆ ಸಂಘಟನೆ ಮತ್ತು ಕಾನೂನು ಚಲಾಯಿಸುವ ಅಧಿಕಾರವನ್ನು ನೀಡಿತು. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಪೊಲೀಸರ ಸೇವೆಯನ್ನು ಶ್ಲಾಘಿಸಿದ ಅವರು, ಪೊಲೀಸರು ಸರ್ಕಾರದ ಅವಿಭಾಜ್ಯ ಅಂಗವಾಗಿ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಈ ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಕೆಲಸದ ಅವಧಿಯಲ್ಲಿ ಎಷ್ಟೇ ಒತ್ತಡಗಳಿದ್ದರೂ, ಅದನ್ನು ಮನೆಗೆ ಕೊಂಡೊಯ್ಯಬಾರದು. ಕುಟುಂಬದವರ ಮೇಲೆ ಒತ್ತಡ ಹೇರದೆ ಸಾಮಾಜಿಕವಾಗಿ ಆರೋಗ್ಯಕರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ವಿಜಯನಗರ ಜಿಲ್ಲಾ ಪೊಲೀಸ್ ಘಟಕವು ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಿತರಕ್ಷಣೆಗಾಗಿ 2025-26ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಸಿಬ್ಬಂದಿಗಾಗಿ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ 2025 ಏಪ್ರಿಲ್ 1 ರಿಂದ ಈವರೆಗೆ ಒಟ್ಟು 268 ಜನರು (ಸಿಬ್ಬಂದಿ ಮತ್ತು ಕುಟುಂಬದವರು) ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1.25ಲಕ್ಷ, ಅಧಿಕಾರಿ, ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಕನ್ನಡಕ ಖರೀದಿಗಾಗಿ ರೂ.71,540, ನಾಲ್ಕು ಜನರಿಗೆ ಮರಣೋತ್ತರ ಸಹಾಯಧನವಾಗಿ 60 ಸಾವಿರ ಹಾಗೂ 21 ವಿವಿಧ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸನ್ಮಾನಕ್ಕಾಗಿ 1.05 ಲಕ್ಷ ಸೇರಿ 12.61 ಲಕ್ಷ ಧನ ಸಹಾಯ ನೀಡಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ವಿಜಯನಗರ ಜಿಲ್ಲಾ ಪೊಲೀಸ್ ಘಟಕವು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪ್ರಗತಿ ವರದಿ ಬಿಡುಗಡೆಯಾಗಿದೆ. ಅರೋಗ್ಯ ಭಾಗ್ಯ ಯೋಜನೆಯಡಿ 2025 ರ ಏಪ್ರಿಲ್ 1 ರಿಂದ ಈವರೆಗೆ ಒಟ್ಟು 32 ಜನ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬದವರು ‘ಆರೋಗ್ಯ ಭಾಗ್ಯ’ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ನಿವೃತ್ತ ಸಿಬ್ಬಂದಿಗಳಿಗೆ ಒಟ್ಟು ರೂ. 2.36 ಲಕ್ಷ ಧನ ಸಹಾಯ ನೀಡಲಾಗಿದೆ. ಧ್ವಜ ಮಾರಾಟ ದಿಂದ 26.82 ಲಕ್ಷ ನಿಧಿ ಸಂಗ್ರಹ: 2025ರ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಧ್ವಜ ಮಾರಾಟದಿಂದ ಒಟ್ಟು 26,82,600 ರೂ. ನಿಧಿ ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಶೇ. 50 ರೂ.13,41,300 ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಹಾಗೂ ಶೇ. 50 ಅಂದರೆ ರೂ.13,41,300 ಗಳನ್ನು ಸಮಾನವಾಗಿ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಇದರಿಂದ ನಿವೃತ್ತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ವೈದ್ಯಕೀಯ ಸಹಾಯ ಮಾಡಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಇಲಾಖೆಯ 6 ತುಕಡಿಗಳಿಂದ ಆಕರ್ಷಕ ಪೆರೇಡ್ ನಡೆಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಪೊಲೀಸ್ ಉಪಾಧೀಕ್ಷಕ ಡಾ.ಮಂಜುನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
