ಮಾವಿನ ಹಣ್ಣಿನ ಕೊರಕ ನೊಣದ ಹಾವಳಿ ನಿಯಂತ್ರಣ : ತೋಟಗಾರಿಕೆ ಇಲಾಖೆ ಕ್ರಮ ಅನುಸರಿಸಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).
ವಿಜಯನಗರ ಜಿಲ್ಲೆಯ ಎಲ್ಲಾ ಮಾವು ಬೆಳೆಗಾರರು ಉತ್ತಮ ಗುಣ ಮಟ್ಟದ ಮಾವಿನ ಫಸಲನ್ನು ಪಡೆಯಲು ಮತ್ತು ಮಾವಿನ ಹಣ್ಣಿನ ಕೊರಕ ನೊಣದ ಹಾವಳಿ ನಿಯಂತ್ರಣಕ್ಕೆ ಹಲವು ಕ್ರಮಗಳ ಸೂಚಿಸಲಾಗಿದೆ. ಎಲ್ಲಾ ಮಾವು ಬೆಳಗಾರ ರೈತರು ಅನುಸರಿಸುವಂತೆ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇತ್ತೀಚೆಗೆ ಮಾವಿನ ಬೆಳೆಯಲ್ಲಿ ಹಣ್ಣಿನ ಕೊರಕ ನೊಣದ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಶೇ.20 ರಷ್ಟು ಇಳುವರಿ ಕುಂಠಿತವಾಗುತ್ತಿರುವುದಲ್ಲದೆ ಮಾರುಕಟ್ಟೆಯಲ್ಲಿ ಹಣ್ಣಿನ ಬೇಡಿಕೆ ಕುಸಿತ ಕಂಡಿದೆ. ಇದರ ಹಾವಳಿ ತಡವಾಗಿ ಹಣ್ಣು ಬಿಡುವ ತಳಿಗಳಲ್ಲಿ ಹೆಚ್ಚು ಕಂಡುಬರುತ್ತದೆ. ಮಾವಿನ ಹಣ್ಣಿನ ಕೊರಕ ನೊಣವು ಒಂದು ಮಧ್ಯಮ ಗಾತ್ರದ ನೊಣವಾಗಿದ್ದು ಇದು ಮಾವು ಕಾಯಿ ಹಂತದಲ್ಲಿದ್ದಾಗ ಮೊಟ್ಟೆಗಳನ್ನು ಇಡುತ್ತದೆ. ನೊಣವು ಫೆಬ್ರವರಿ- ಮಾರ್ಚ್ ಮಾಹೆಯಲ್ಲಿ ಕಾಯಿಗಳ ಮೇಲೆ ಮೊಟ್ಟೆ ಇಡುತ್ತದೆ. ಕಾರಣ ಮೊಟ್ಟೆಗಳನ್ನು ನಾಶ ಮಾಡುವುದರಿಂದ ಪ್ರಾಥಮಿಕ ಹಂತದಲ್ಲಿ ಹತೋಟಿ ಮಾಡಬಹುದು. ಇದಕ್ಕಾಗಿ ಫೆನಿಥಿಯಾನ್ 01 ಮಿ.ಲೀ ನ್ನು 01 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ನಿಯಂತ್ರಣ ಮಾಡಬಹುದು. ಫೆರಮೋನ್ (ಆಕರ್ಷಕ) ಬಲೆಗಳನ್ನು ಉಪಯೋಗಿಸಿ 01 ಲೀಟರ್ ನೀರಿನಲ್ಲಿ ಮಿಥೈಲ್ ಯೂಜಿನಾಲ್ 01 ಮಿ.ಲೀ ಮತ್ತು 01 ಮಿ.ಲೀ ಮೆಲಾಥಿಯಾನ್ ಮಿಶ್ರಣ ಪ್ರತಿ ಎಕರೆಗೆ 3-4 ಬಲೆಗಳನ್ನು ಅಲ್ಲಲ್ಲಿ ಇಡುವುದರಿಂದಲೂ ನಿಯಂತ್ರಣ ಸಾಧ್ಯ. ಹಣ್ಣು ಪೂರ್ಣ ಮಾಗುವ ಹಂತದ ಮಾವಿನ ಕಾಯಿಗಳನ್ನು ಕೊಯ್ಲು ಮಾಡಿ. ಮರದಲ್ಲೇ ಹಣ್ಣಾಗಲು ಬಿಡಬೇಡಿ.
ಕೊಯ್ಲಿನ ನಂತರ ಕಾಯಿಯ ಮೇಲೆ ಈಗಾಗಲೇ ಇಟ್ಟಿರುವ ಮೊಟ್ಟೆಗಳನ್ನು ನಾಶಮಾಡಲು ಕಾಯಿಗಳನ್ನು ಉಪ್ಪಿನ ದ್ರಾವಣದಲ್ಲಿ 30 ಸೆಕೆಂಡ್ ನೆನೆಸಬೇಕು. ಹಾಗೆಯೇ ಮಾಗಿ ಉಳುಮೆ ಮಾಡುವುದರಿಂದ ನೆಲದೊಳಗೆ ಅವಿತಿರುವ ನೊಣದ ಪ್ಯುಪಾ ಹೊರಬಂದು ಬಿಸಿಲಿಗೆ ಸಾಯುತ್ತದೆ ಅಥವಾ ಇತರೆ ಪಕ್ಷಿಗಳು ತಿನ್ನುತ್ತವೆ.
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ಹೋಬಳಿಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಪರ್ಕಿಸಬಹುದಾಗಿದೆ. ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹೊಸಪೇಟೆ 9164297220, ಮರಿಯಮ್ಮನಹಳ್ಳಿ 7204888978, ಕಮಲಾಪುರ 8123465548 ಹೊಸಪೇಟೆ 8310291867 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
