ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಟ್ರಾಕ್ಸ್ ಪಲ್ಟಿಯಾಗಿ ಮೂವರು ಮಕ್ಕಳು ಸೇರಿ 9 ಜನರಿಗೆ ಗಂಭೀರ ಗಾಯಗೊಂಡ ಘಟನೆ ಮಾ.27 ರಂದು ನಡೆದಿದೆ.
ಹೆದ್ದಾರಿ ಬದಿ ಲಾರಿ ನಿಂತಿದ್ದ ಹಿನ್ನೆಲೆ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುವಾಗ ಟ್ರಾಕ್ಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಗಾಯಾಳುಗಳನ್ನ ಹೊಸಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಕ್ಸ್ ಚಾಲಕ ಲಾಲ್ಸಾಬ್, ಕುಮಾರ್, ಅನ್ನಪೂರ್ಣ, ಬಾಲಕಿಯರಾದ ರಕ್ಷಿತಾ, ಅಕ್ಕಮ್ಮ, ನಂದಿನಿ ಗಾಯಗೊಂಡಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗೋವಿನಕೊಪ್ಪ, ಕೊಣ್ಣೂರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
13 ಜನ ಡ್ರಮ್ ಸೆಟ್ ಬಾರಿಸೋ ಕಲಾವಿದರು ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ, ಹುನಗುಂದಕ್ಕೆ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ. ಅಪಘಾತ ಸ್ಥಳಕ್ಕೆ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.

