ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ಹಗರಿಬೊಮ್ಮನಹಳ್ಳಿ : ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆತಂದಿದ್ದ ಯುವಕನೊಬ್ಬ ಠಾಣೆಯಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಪಟ್ಟಣದ ಮೆಹಬೂಬ್ ನಗರದ ನಿವಾಸಿ ಖಲಿಲುಲ್ಲಾ (38) ಮೃತ ದುರ್ದೈವಿ. ಪೊಲೀಸರ ದೈಹಿಕ ಹಿಂಸೆಯಿಂದಾಗಿಯೇ ಲಾಕಪ್‌ನಲ್ಲಿ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ವಿವರ:
ಶನಿವಾರ ರಾತ್ರಿ ಖಲಿಲುಲ್ಲಾ ಮತ್ತು ಆತನ ಪತ್ನಿ ಶೈನಾಭಿ ನಡುವೆ ಜಗಳವಾಗಿದ್ದು, ಈ ಸಂಬಂಧ ಪತ್ನಿ ತುರ್ತು ಸಹಾಯವಾಣಿ 112 (ERSS) ಗೆ ಕರೆ ಮಾಡಿ ದೂರು ನೀಡಿದ್ದರು. ಸ್ಥಳಕ್ಕೆ ಬಂದ 112 ಸಿಬ್ಬಂದಿ ಖಲಿಲ್‌ನನ್ನು ಠಾಣೆಗೆ ಕರೆತಂದಿದ್ದರು. ಈ ವೇಳೆ ಪೊಲೀಸರು ನಡೆಸಿದ ಹಲ್ಲೆ ತಾಳಲಾರದೆ ಖಲಿಲ್ ಠಾಣೆಯಲ್ಲೇ ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಟೋದಲ್ಲಿ ಆತನನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಎಸ್ಪಿ ಜಾಹ್ನವಿ ಸ್ಪಷ್ಟನೆ:
ಖಲಿಲುಲ್ಲಾ ಮದ್ಯಪಾನ ಮಾಡಿ ಜಗಳವಾಡುತ್ತಿದ್ದು, ಆತನಿಗೆ ಬುದ್ಧಿವಾದ ಹೇಳುವಂತೆ ಪತ್ನಿ ಮನವಿ ಮಾಡಿದ್ದರಿಂದ 112 ವಾಹನದಲ್ಲಿ ಠಾಣೆಗೆ ಕರೆತರಲಾಗಿತ್ತು. ಠಾಣೆಯಲ್ಲಿ ಆತ ಬಿದ್ದು ಗಾಯಗೊಂಡಿದ್ದರಿಂದ ಸಿಬ್ಬಂದಿ ಕೂಡಲೇ ಟಾಟಾ ಏಸ್ ವಾಹನದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಆದರೆ, ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಪತ್ನಿ ದೂರು ನೀಡಿದ್ದು, ಈ ಸಂಬಂಧ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ವೆಂಕಟೇಶ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಠಾಣೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ತಜ್ಞರ ತಂಡದ ಮೂಲಕ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಜಾಹ್ನವಿ ತಿಳಿಸಿದ್ದಾರೆ.
ಶಾಸಕ ನೇಮಿರಾಜ್ ನಾಯ್ಕ್ ಆಕ್ರೋಶ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ನೇಮಿರಾಜ್ ನಾಯ್ಕ್, ಠಾಣೆಯಲ್ಲಿ ನಡೆದಿರುವ ಈ ಕೃತ್ಯ ಪೈಶಾಚಿಕವಾದದ್ದು. ಇದಕ್ಕೆ ಕಾರಣರಾದ ಪೊಲೀಸ್ ಸಿಬ್ಬಂದಿಗೆ ಕಠಿಣ ಶಿಕ್ಷೆಯಾಗಲೇಬೇಕು. ಈ ವಿಷಯವನ್ನು ರಾಜ್ಯ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಹರಪನಹಳ್ಳಿ ಅಂಜುಮನ್ ಕಮಿಟಿಯ ನೂರ ಮಹಮ್ಮದ್ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪಟ್ಟಣದಲ್ಲಿ ಬಿಗಿ ವಾತಾವರಣ — ಸಶಸ್ತ್ರ ಪಡೆ ನಿಯೋಜನೆ:
ಪ್ರಕರಣದ ಗಂಭೀರತೆ ಅರಿತು ಬಳ್ಳಾರಿ ವಲಯ ಐಜಿಪಿ ಡಾ. ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಲ್ಲಿ ಕೆಎಸ್‌ಆರ್‌ಪಿ (KSRP) ಹಾಗೂ ಡಿಎಆರ್ (DAR) ತುಕಡಿಗಳನ್ನು ನಿಯೋಜಿಸಲಾಗಿದೆ. ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಬಳ್ಳಾರಿಯ ಸಿಪಿಐಗಳು, 15 ಪಿಎಸ್‌ಐ ಹಾಗೂ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
