ಪ್ರಥಮ ಅಣು ಬಾಂಬ್ ಪರೀಕ್ಷೆ ‘ಪೋಖ್ರಾನ್’ ಮತ್ತು ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಯಶಸ್ಸಿನ ಸಾಧಕ – ದೇಶಭಕ್ತಿಯ ಪ್ರೇರಕ : ಭಾರತೀಯ ಶ್ರೇಷ್ಠ ಪರಮಾಣು ವಿಜ್ಞಾನಿ ಕನ್ನಡಿಗ ಡಾ.ರಾಜಾರಾಮಣ್ಣ.
“ಭಾರತದಲ್ಲಿ ಪೋಖ್ರಾನ್ ಅಣು ಪರೀಕ್ಷೆ ಯಶಸ್ವಿ ಬಳಿಕ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರು ವಿಜ್ಞಾನಿ ಡಾ.ರಾಜಾರಾಮಣ್ಣರಿಗೆ ವಿಶೇಷ ಅತಿಥ್ಯ ನೀಡಿ ಇರಾಕಿಗೆ ಕರೆಯಿಸಿಕೊಂಡು ಖಾಲಿ ಚೆಕ್ ಬುಕ್ ನೀಡುವ ಮೂಲಕ ಇರಾಕಿನಲ್ಲಿ ಅತ್ಯುನ್ನತ ಹುದ್ದೆಯನ್ನು ನೀಡುವುದಾಗಿ ಆಫರ್ ನೀಡಿದರೂ, ನಿರಾಕರಿಸಿ ಅಲ್ಲಿಂದ ಪವಾಡ ಸದೃಶ್ಯರಾಗಿ ಪಾರಾಗಿ, ನನ್ನ ಸೇವೆ ಏನಿದ್ದರೂ ಭಾರತ ದೇಶಕ್ಕೆ ಮಾತ್ರ ಎಂದು ದೇಶಭಕ್ತಿ ಮೆರೆದ ಹೆಮ್ಮೆಯ ಅಣು ವಿಜ್ಞಾನಿ ಡಾ.ರಾಜಾರಾಮಣ್ಣ ಕನ್ನಡಿಗನೆಂಬುದು ಪ್ರೇರಣೆ ಮೂಡಿಸುತ್ತಿದೆ.”
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಒಂದು ಕಡೆ ಹೇಳ್ತಾರೆ, ಅಣು ಪರೀಕ್ಷೆಯಲ್ಲಿ ಬುದ್ಧ ನಕ್ಕಿದ್ದು ರಾಜಾರಾಮಣ್ಣ ಅವರಿಂದ ಎಂದು. ಹಣ ಮತ್ತು ಪದವಿಯ ಆಸೆ ಇದ್ದಿದ್ದರೇ ಭಾರತ ಲಾಫಿಂಗ್ ಬುದ್ಧ ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುತ್ತಿರಲಿಲ್ಲಾ. ಅದಕ್ಕಿಂತ ಹೆಚ್ಚಾಗಿ ಮೊದಲ ಬಾರಿಗೆ ಪೊಖ್ರಾನ್ ನಲ್ಲಿ ಭಾರತದ ಯಶಸ್ವಿ ಪ್ರಯೋಗದ ಬಳಿಕ ಡಾ.ರಾಜಾರಾಮಣ್ಣ ಅವರನ್ನು ವಿಶೇಷ ಆತಿಥ್ಯದೊಂದಿಗೆ ಇರಾಕಿನ ಅಂದಿನ ಸರ್ವಾಧಿಕಾರಿ ಸದ್ದಾಂಹುಸೇನ್ ಇರಾಕಿಗೆ ಕರೆಸಿಕೊಂಡು ರಾಮಣ್ಣನವರಿಗೆ ಖಾಲಿ ಚೆಕ್ ನೀಡಿ ಮತ್ತು ಅದರೊಂದಿಗೆ ಇರಾಕಿನ ಅತ್ಯುನ್ನತ ಹುದ್ದೆ ನೀಡುವುದಾಗಿ ಘೋಷಣೆ ಮಾಡಿದ್ದರು. (ಆಫ್ ದಿ ರೆಕಾರ್ಡ್; ಅವರನ್ನು ಸೆರೆಯಾಳು ಆಗಿಸಲು ಸದ್ಧಾಂ ಹುಸೇನ್ ಉಪಾಯ ಮಾಡಿದ್ದರು ಎಂಬುದಾಗಿ ಆಮೇಲೆ ತಿಳಿದ ಸಂಗತಿ) ಸಿನಿಮೀಯ ರೀತಿಯಲ್ಲಿ ಅಲ್ಲಿಂದ ಅವರು ಪಾರಾಗಿ ಬಂದು ನನ್ನ ಸಂಶೋಧನೆ ಏನಿದ್ದರೂ ಭಾರತಮಾತೆಗೆ ಮಾತ್ರ ಎಂಬುದನ್ನು ಸಾಬೀತು ಪಡಿಸಿದ್ದರು.
ಅವರ ದೇಶಭಕ್ತಿಗೆ ಕೇವಲ ಇದೊಂದೆ ಪ್ರಸಂಗವಲ್ಲ ಬ್ರಿಟನ್ನಿನ್ ಕಿಂಗ್ಸ್ ಕಾಲೇಜಿನಲ್ಲಿ ಪಿ.ಎಚ್.ಡಿ ಮಾಡುವಾಗ ಇಡೀ ಪ್ರಪಂಚದ ಬಲಿಷ್ಟ ರಾಷ್ಟ್ರಗಳು ರಾಜಾರಾಮಣ್ಣ ಅವರನ್ನು ಸಂಪರ್ಕಿಸಿದವು, ಆದರೇ ರಾಮಣ್ಣನವರ ಉತ್ತರ ಒಂದೇ ನನ್ನ ಅಣು ವಿಜ್ಙಾನ ಸಂಶೋಧನೆ ಭಾರತಕ್ಕೆ ಮಾತ್ರ ಸೀಮಿತ ಎಂದಿದ್ದರು.
ಬಳಿಕ ಹೋಮಿಜಹಾಂಗಿರ್ ಬಾಬಾ ಅವರ ಟಿ.ಐ.ಎಫ್.ಆರ್ಸೇರಿ ಭಾರತದ ಪ್ರಥಮ ನೂಕ್ಲಿಯರ್ ರಿಯಾಕ್ಟರ್ (ನ್ಯೂಕ್ಲಿಯರ್ ಪ್ರಯೋಗದ ಕನಸಿನ ಕೂಸು) ‘ಅಪ್ಸರಾ’ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ ಇಂದು ಜಗತ್ತಿನ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಲು ಒಂದು ಕ್ಷಣ ಯೋಚನೆ ಮಾಡುವಂತೆ ಮಾಡಿದವರು ಹೆಮ್ಮೆಯ ಕನ್ನಡಿಗ ಡಾ.ರಾಜಾರಾಮಣ್ಣರನ್ನು ಸ್ಮರಿಸಬೇಕು.
ಭಾರತ ನ್ಯೂಕ್ಲಿಯರ್ ರಾಷ್ಟ್ರವಾಗಲು ರಾಜಾರಾಮಣ್ಣನವರ ಸೇವೆ ಅಪಾರ ಮತ್ತು ಅನನ್ಯ. ಡಾ.ಕಲಾಂ ಅವರು ರಾಜಾರಾಮಣ್ಣ ಅವರನ್ನು ಅವರ ಮಾರ್ಗದರ್ಶಕರು ಮತ್ತು ಗುರುಗಳು ಎಂದು ಸಂಭೋಧನೆ ಮಾಡುತ್ತಿದ್ದರು.
ಡಾ.ರಾಜಾ ರಾಮಣ್ಣ ಅವರು 1925, ಜನವರಿ 28 ರಂದು ಬ್ರಿಟಿಷ್ ಭಾರತದ ಮೈಸೂರು ರಾಜ್ಯದ ತಿಪಟೂರಿನಲ್ಲಿ (ಈಗ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ) ರುಕ್ಮಿಣಿ ಮತ್ತು ರಾಮಣ್ಣ ದಂಪತಿಗಳಿಗೆ ಜನಿಸಿದರು. ರಾಮಣ್ಣ ತಮ್ಮ ಚಿಕ್ಕಮ್ಮ ರಾಜಮ್ಮ ಅವರಿಂದ ತುಂಬಾ ಪ್ರಭಾವಿತರಾಗಿದ್ದರು. ರಾಜಮ್ಮ ಒಬ್ಬ ಸರ್ಕಾರಿ ಶಾಲಾ ಶಿಕ್ಷಕಿ. ರಾಮಣ್ಣನವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಮೈಸೂರಿನ ಡಾಲ್ವಾಯ್ ಶಾಲೆ ಮತ್ತು ಗುಡ್ ಶೆಫರ್ಡ್ ಕಾನ್ವೆಂಟ್‌ನಲ್ಲಿ ಮಾಡಿದರು. ನಂತರ ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಪೂರ್ಣಗೊಳಿಸಿದರು. ರಾಮಣ್ಣ ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಆರನೇ ವಯಸ್ಸಿನಲ್ಲಿ ಪಿಯಾನೋ ನುಡಿಸಲು ಪ್ರಾರಂಭಿಸಿದರು. ಅವರು 12ನೇ ವಯಸ್ಸಿನಲ್ಲಿ ಮೈಸೂರು ಮಹಾರಾಜರ ಮುಂದೆ ಆಡಿಷನ್ ನೀಡಿ ಸೈ ಎನಿಸಿಕೊಂಡಿದ್ದರು.

1945ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು. ರಾಮಣ್ಣ ಬಾಂಬೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. 1949ರಲ್ಲಿ ಅವರು ಟಾಟಾ ಗ್ರೂಪ್‌ನ ವಿದ್ಯಾರ್ಥಿ ವೇತನದ ಮೇಲೆ ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪರಮಾಣು ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು. ಭೌತವಿಜ್ಞಾನದ ರೂವಾರಿ ಎನಿಸಿದ್ದ ಹೋಮಿ ಜಹಾಂಗೀರ್ ಭಾಭಾ ಅವರ ಸಂಪರ್ಕ ಬೆಳೆಸಿದ ರಾಜಾರಾಮಣ್ಣ ಅವರು ಭಾಭಾರವರ ಕೆಲಸದಿಂದ ಪ್ರೇರಿತರಾದರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ರಾಮಣ್ಣ ಭಾಭಾ ಅವರ ಅಡಿಯಲ್ಲಿ ಕೆಲಸ ಮಾಡಲು ಸೇರಿದರು. ಟ್ರೋಂಬೆಯಲ್ಲಿರುವ ಪರಮಾಣು ಶಕ್ತಿ ಸ್ಥಾಪನೆಯಲ್ಲಿ (ನಂತರ ಭಾಭಾ ಪರಮಾಣು ಸಂಶೋಧನಾ ಕೇಂದ್ರ (BARC) ಎಂದು ಮರುನಾಮಕರಣ ಮಾಡಲಾಯಿತು) ಭಾರತೀಯ ಪರಮಾಣು ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1957ರಲ್ಲಿ, ಮೊದಲ ಸಂಶೋಧನಾ ಪರಮಾಣು ರಿಯಾಕ್ಟರ್ ‘ಅಪ್ಸರಾ’ BARC ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ರಾಮಣ್ಣ ಅವರು ನ್ಯೂಟ್ರಾನ್ ಹೊರಸೂಸುವಿಕೆ ಅಧ್ಯಯನಗಳು ಮತ್ತು ಪರಮಾಣು ವಿದಳನದ ಸಂಶೋಧನೆಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 1958 ರಲ್ಲಿ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಉತ್ಪಾದಿಸಲು “ಪ್ರಾಜೆಕ್ಟ್ ಫೀನಿಕ್ಸ್” ಗೆ ಅಧಿಕಾರ ನೀಡಿದರು. 1957 ರಲ್ಲಿ, ಪರಮಾಣು ಭೌತಶಾಸ್ತ್ರದಲ್ಲಿ ವಿಜ್ಞಾನಿಗಳಿಗೆ ತರಬೇತಿ ನೀಡಲು ರಾಮಣ್ಣ BARC ನಲ್ಲಿ ತರಬೇತಿ ಶಾಲೆಯನ್ನು ಸ್ಥಾಪಿಸಿದರು.
1960ರ ದಶಕದ ಆರಂಭದಲ್ಲಿ, ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಜ್ಞಾನದ ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು. 1966 ರಲ್ಲಿ ಭಾಭಾ ಅವರ ಅನಿರೀಕ್ಷಿತ ಮರಣದ ನಂತರ, ಪರಮಾಣು ಬಾಂಬ್‌ನ ವಿನ್ಯಾಸ ಕಾರ್ಯವು ರಾಮಣ್ಣ ಅವರ ನೇತೃತ್ವದಲ್ಲಿ ಮುಂದುವರೆಯಿತು, ಅವರು ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನ ಸಂಶೋಧನೆಯ ಉಸ್ತುವಾರಿ ವಹಿಸಿಕೊಂಡರು. 1966 ರಲ್ಲಿ ಇಂದಿರಾಗಾಂಧಿ ಪ್ರಧಾನಿ ಇದ್ದಾಗ, ಪರಮಾಣು ಸಾಧನದ ವಿನ್ಯಾಸ ಮತ್ತು ತಯಾರಿಕೆಯ ಯೋಜನೆಯು ರಹಸ್ಯವಾಗಿ ಮುಂದುವರೆಯಿತು. ಈ ಕಾರ್ಯಕ್ರಮವು 75 ವಿಜ್ಞಾನಿಗಳನ್ನು ನೇಮಿಸಿತು. ರಾಮಣ್ಣ ಈ ಯೋಜನೆಯ ನೇತೃತ್ವ ವಹಿಸಿದ್ದರು. ನಂತರ ಭಾರತ ಸರ್ಕಾರ ಯುರೇನಿಯಂ ಬದಲಿಗೆ ಪ್ಲುಟೋನಿಯಂ ಉತ್ಪಾದನೆಯ ಕಡೆಗೆ ಹೆಚ್ಚು ಆದ್ಯತೆ ನೀಡಿತು.
ಮುಂದಿನದು ಇತಿಹಾಸ 1969ರಲ್ಲಿ, ಪರಮಾಣು ಬಾಂಬ್ ಉತ್ಪಾದನೆಗೆ ಸಾಕಷ್ಟು ಪ್ಲುಟೋನಿಯಂ ಸಂಗ್ರಹವಾಯಿತು. 1968–69 ರಲ್ಲಿ, ಪೂರ್ಣಿಮಾ ಎಂಬ ಪ್ಲುಟೋನಿಯಂ ಇಂಧನ ಚಾಲಿತ ವೇಗದ ರಿಯಾಕ್ಟರ್ ಅನ್ನು BARC ನಲ್ಲಿ ಸ್ಥಾಪಿಸಲಾಯಿತು. 1972 ರಲ್ಲಿ ರಾಮಣ್ಣ ಅವರನ್ನು BARC ಅಧ್ಯಕ್ಷರನ್ನಾಗಿ ನೇಮಿಸುವುದರೊಂದಿಗೆ ಪರಮಾಣು ಸಾಧನವನ್ನು ನಿರ್ಮಿಸುವ ಕೆಲಸ ಮುಂದುವರೆಯಿತು. ಬಾಂಬ್‌ನ ಯಂತ್ರಾಂಶವನ್ನು 1972 ರ ಆರಂಭದಲ್ಲಿ ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಸೆಪ್ಟೆಂಬರ್ 1972 ರಲ್ಲಿ ಪ್ರಧಾನ ಮಂತ್ರಿ ಪರಮಾಣು ಪರೀಕ್ಷಾ ಸಾಧನವನ್ನು ಅಭಿವೃದ್ಧಿಪಡಿಸಲು ಅಧಿಕಾರ ನೀಡಿದರು.
ಮೇ,1974 ರಲ್ಲಿ ಪರಮಾಣು ಪರೀಕ್ಷೆಯನ್ನು ರಾಜಾರಾಮಣ್ಣ ನವರ ನೇತೃತ್ವದಲ್ಲಿ ಯೋಜಿಸಲಾಗಿತ್ತು, ಇದನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಯಿತು. ಈ ಪರೀಕ್ಷೆಗೆ ಸ್ಮೈಲಿಂಗ್ ಬುದ್ಧ ಎಂಬ ಕೋಡ್ ಹೆಸರಿಡಲಾಗಿತ್ತು ಮತ್ತು ಇದನ್ನು ಶಾಂತಿಯುತ ಪರಮಾಣು ಸ್ಫೋಟಕ (PNE) ಎಂದು ಜಗತ್ತಿಗೆ ತೊರ್ಪಡಿಸಿ ಯಶಸ್ವಿಯಾದರು. 1975 ರಲ್ಲಿ, ರಾಮಣ್ಣ ಅವರನ್ನು ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು. ಮತ್ತು ರಾಮಣ್ಣ ಅವರು ಕೇಂದ್ರ ಸಚಿವರಾಗಿ ಮತ್ತು ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾದರು. ಡಾ.ರಾಜಾರಾಮಣ್ಣ ಅವರು ಸೆಪ್ಟೆಂಬರ್ 23, 2004 ರಂದು ತಮ್ಮ 79ನೇ ವಯಸ್ಸಿನಲ್ಲಿ ಜೀರ್ಣಾಂಗ ಸಮಸ್ಯೆಯಿಂದ ನಿಧನರಾದರು.
ರಾಜಾರಾಮಣ್ಣನವರು ಭಾರತ ಮಾತೆ ಸೇವೆಯನ್ನು ಅತ್ಯಂತ ಗೌರವಯುತವಾಗಿ ಸಲ್ಲಿಸಿ, ಭಾರತಮಾತೆಯ ಚರಣಾರಂವಿಂದಕ್ಕೆ ಪುಷ್ಪವಾದರು. ಇವರೊಬ್ಬ ಕೇವಲ ಸಾಧಕರಷ್ಟೇ ಅಲ್ಲ, ದೇಶಭಕ್ತಿಯ ಪ್ರೇರಕ. ಇಂತಹ ಮಹಾನ್ ಚೇತನರ ಸ್ಮರಣೆಯಿಂದ ಮಾತ್ರ ಇಂದಿನ ಯುವವಿಜ್ಞಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅವರ ಸಾಧನೆಯಿಂದ ಪ್ರೇರಣೆ ಸಿಗಲಿದೆ.

ಅವಿನಾಶ್ ಜಾಧವ್,
ಭೌತಶಾಸ್ತ್ರ ಉಪನ್ಯಾಸಕರು,
ಹಗರಿಬೊಮ್ಮನಹಳ್ಳಿ.
