ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಇದೇ ವರ್ಷಾಂತ್ಯದ ವೇಳೆಗೆ ನೆನಗುದಿಗೆ ಬಿದ್ದಿರುವ ಗಂಗಾಮತಸ್ತ ಸಮುದಾಯ ಭವನ, ಗಂಗಾಮಾತೆ ದೇಗುಲ ಹಾಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅಂಬಿಗರ ಚೌಡಯ್ಯನವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಶೀಘ್ರ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಕೃಷ್ಣ ಚಿತ್ರಮಂದಿರದಲ್ಲಿ ವಿಜಯನಗರ ಜಿಲ್ಲಾ ಗಂಗಾಮತ (ಬೆಸ್ತ) ಸಮಾಜ ಸಂಘದಿಂದ ಏರ್ಪಡಿಸಿದ್ದ ನಿಜಶರಣ ಅಂಬಿರ ಚೌಡಯ್ಯ ವೃತ್ತ ಮತ್ತು ನಾಮಫಲಕ ಅನಾವರಣ, ಜಿಲ್ಲಾ ಮಟ್ಟದ ಪೃತಿಭಾ ಪುರಸ್ಕಾರ, ಮಹರ್ಷಿ ವೇದವ್ಯಾಸಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ತಾಲೂಕಿನ ವಿವಿಧ ಸಮಾಜದ ಮಹನೀಯರ ಪುತ್ಥಳಿ ನಿರ್ಮಾಣಕ್ಕೆ ತಲಾ 65 ಲಕ್ಷ ರೂ ಅನುದಾನ ನೀಡಲಾಗಿದೆ. ಸಮುದಾಯದ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಬೇಕಾದ ಕ್ರಮ ವಹಿಸುವೆ. ಆಡಳಿತ ಸರ್ಕಾರದ ಶಾಸಕನಲ್ಲದಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಅನುದಾನ ತರುವಲ್ಲಿ ನನಗೆ ನೀವೇ ಶಕ್ತಿ ನೀಡಿದ್ದೀರಿ. ನಿಮ್ಮ ಬೆಂಬಲ ಸಹಕಾರ ಸದಾ ಇರಲಿ. ಎಲ್ಲಾ ಸಮುದಾಯಗಳ ಅಗತ್ಯಗಳನ್ನು ಸಮಾನತೆಯಿಂದ ಈಡೇರಿಸಲು ಬದ್ಧನಿದ್ದೇನೆ ಎಂದರು.
ವಿದ್ಯಾರ್ಥಿಗಳು ಪಾಲಕರಿಗೆ ನಂಬಿಕೆ ಮತ್ತು ಅಭಯ ನೀಡಿ :
ಮಕ್ಕಳ ಹಿತಕ್ಕಾಗಿ ತಂದೆ ತಾಯಂದಿರ ಸಂಕಷ್ಟ, ತ್ಯಾಗ ಮತ್ತು ಪರಿಶ್ರಮ ಅರಿತು ಅವರ ಕನಸುಗಳನ್ನು ಈಡೇರಿಸಲು ವಿದ್ಯಾರ್ಥಿಗಳು ನಂಬಿಕೆ ಮತ್ತು ಅಭಯ ನೀಡಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೀವನದ ಪರೀಕ್ಷೆಯಲ್ಲಿ ನಪಾಸು ಆಗದಿರಿ :
ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಶಾಲಾ ಪರೀಕ್ಷೆಯಲ್ಲಿ ಫೇಲಾದರೂ ಪರವಾಗಿಲ್ಲ, ಜೀವನದ ಪರೀಕ್ಷೆಯಲ್ಲಿ ನಪಾಸು ಆಗದಿರಿ. ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ ಎಂಬುದನ್ನು ವಿದ್ಯಾರ್ಥಿಗಳು ಮರೆಯದಿರಿ. ಪ್ರತಿಭೆಗಳಿಗೆ ಪುರಸ್ಕರಿಸಲು ಈ ವೇದಿಕೆ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಲಾಗಿದೆ. ತಂದೆ ಮತ್ತು ತಾಯಂದಿರು ಮುಖದಲ್ಲಿನ ಸಂತಸವೇ ನಿಮ್ಮ ಸಾಧನೆಯ ಯಶಸ್ಸು ಎಂದರು.
ಗುರಿ ಸಾಧನೆಗೆ ಈ ಸೂತ್ರ ಬಳಸಿ :
ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಈ.ಧನರಾಜ ಅವರು ಉಪನ್ಯಾಸದಲ್ಲಿ ಮಾತನಾಡಿ, ಗಂಗಾಮತಸ್ತ ಸಮುದಾಯದಲ್ಲಿ ರಾಷ್ಟ್ರದ ಮಟ್ಟದ ಸಾಧನೆ ಮಾಡಿದ ಅನೇಕ ಗಣ್ಯರು ಇದ್ದಾರೆ. ವಿದ್ಯಾರ್ಥಿಗಳು ನಿಗದಿತ ಗುರಿ ಸಾಧನೆಗೆ ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆದರ್ಶವಾಗಿಸಿಕೊಳ್ಳಿ. ಇವರ ಸಣ್ಣ ಪುಸ್ತಕಗಳು ನಿಮಗೆ ಜೀವನದ ಮಾರ್ಗದರ್ಶಿ ಆಗಲಿವೆ ಎಂದರು.
ಅನ್ಯಾಯ, ದೌರ್ಜನ್ಯ ಸಹಿಸಲ್ಲ :
ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಗಂಗಾಮತ ಸಮಾಜವು ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕಿದೆ. ಅನ್ಯ ಸಮುದಾಯಗಳ ಜತೆಗೆ ಸ್ನೇಹ ಬಾಂಧವ್ಯದಿಂದ ಇದ್ದೇವೆ. ಯಾರಿಗೂ ಅನ್ಯಾಯ ಮಾಡಲ್ಲ ಆದರೆ ಎಂದಿಗೂ ಅನ್ಯಾಯ, ದೌರ್ಜನ್ಯ ಸಹಿಸಲ್ಲ. ಸಮುದಾಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು.
ಈ ವೇಳೆ ರಾಜ್ಯಾಧ್ಯಕ್ಷ ಶಿವಕುಮಾರ್ ನಾಟೀಕರ್ ಮಾತನಾಡಿದರು, ವೇದಿಕೆಯಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನಂದಿಪುರ ಡಾ.ಮಹೇಶ್ವರವಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕಡಲಬಾಳು ಶಾಖಾ ಗವಿಮಠದ ಪ್ರಶಾಂತ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪುರಸ್ಕೃತರಾದ ವೆಂಕಟೇಶ್ ಬಾರಿಕರ,ಡಾ.ಸೋಮಶೇಖರ ಕಬ್ಬೇರ, ಗಾಳೆಪ್ಪ ಗಾದಿಗನೂರು, ಡಾ. ಬಿ ಬಿ ಹೊಸೂರಪ್ಪ, ಪತ್ರಕರ್ತ ಭೀಮಣ್ಣ ಗಜಾಪುರ ಇವರಿಗೆ ಪ್ರಧಾನ ಮಾಡಿದರು. ವರ್ಷದ ವೇದಿಕೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಪುರಸಭೆ ಸದಸ್ಯ ನಾಗರಾಜ್ ಜನ್ನು, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾಲೂಕು ಅಧ್ಯಕ್ಷ ಅಂಬಾಡಿ ಮಹೇಶ್, ಪ್ರಮುಖರಾದ ಮೌಲಾಲಿ, ಬಿ.ಕೆ ಮಂಜುನಾಥ್, ಮಣ್ಣೂರು ನಾಗರಾಜ, ಗೋಣಿ ಬಸವರಾಜ್, ವೈ.ಯಮುನೇಶ್, ಸರ್ದಾರ್ ಯಮನೂರಪ್ಪ, ಯರ್ರಿಸ್ವಾಮಿ ಇತರರಿದ್ದರು. ಶಿಕ್ಷಕ ಶಿವಶಂಕರಯ್ಯ ಕಾರ್ಯಕ್ರಮ ನಿರ್ವಹಿಸಿದರು.
