ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಕೊಟ್ಟೂರು.
ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಯುವತಿ ಉಗಾಂಡ ದೇಶದ ಕಂಪಲ ನಗರದ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಜೂ.27 ರಂದು ನಡೆದಿದೆ.
ಕನ್ನನಾಯಕನಕಟ್ಟೆ ಗ್ರಾಮದ ದಿವಂಗತ ಎ.ಹಾಲಪ್ಪ ಮತ್ತು ಮಂಜುಳಾ ದಂಪತಿಯ ಏಕೈಕ ಪುತ್ರಿ ಬಿಂದು ಎಚ್.ಅಜ್ಜೋಳ (22) ಮೃತ ದುರ್ದೈವಿ.
ಕಂಪಾಲ ನಗರದ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮುಗಿಸಿ ಭಾರತಕ್ಕೆ ಮೃತದೇಹ ತರಲು ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಜು.2 ರಂದು ಮೃತದೇಹ ಬೆಂಗಳೂರು ತಲುಪಲಿದೆ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಪತಿ ಚಂದ್ರಶೇಖರ್ ತನ್ನ ಹಾಗೂ ಬಿಂದು ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಜರ್ಮನಿ ಪ್ರವಾಸಲ್ಲಿರುವ ಸಿರಿಗೇರಿ ಪೀಠದ ಜಗದ್ಗುರು ಡಾ.ಶಿವಮೂರ್ತಿ ಸ್ವಾಮೀಜಿ ಅವರಿಗೆ ವಿಷಯ ತಿಳಿದ ನಂತರ ಮೃತದೇಹ ಶೀಘ್ರ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಲ್ಲಿನ ರಾಯಭಾರಿಗಳನ್ನು ಸಂಪರ್ಕಿಸಿ ಸಹಾಯ ಮಾಡಿದ್ದಾರೆ.
ಉಗಾಂಡದ ಖಾಸಗಿ ಕಂಪನಿಯಲ್ಲಿ ಬಿಂದು ಹಾಗೂ ಪತಿ ಚಂದ್ರಶೇಖರ 2025 ರಲ್ಲಿ ವಿದೇಶಕ್ಕೆ ತೆರಳಿದ್ದರು. ವಿದೇಶಕ್ಕೆ ಹೋದ ದಿನದಿಂದ ಸಾವಿನ ಹಿಂದಿನ ದಿನದವರೆಗೂ ತನ್ನ ತಾಯಿಯೊಂದಿಗೆ ಬಿಂದು ದಿನನಿತ್ಯ ಸಂತಸದಿಂದ ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದಿನದಂದು ಮಧ್ಯಾಹ್ನ ಪತಿಗೆ ಪೋನಾಯಿಸಿ ಊಟಕ್ಕೆ ಮನೆಗೆ ಬರುವಂತೆ ಕರೆದಿದ್ದರು. ಪತಿ ಚಂದ್ರಶೇಖರ್ ಮನೆಗೆ ಬಂದಾಗ ಬಾಗಿಲು ತೆರೆಯದೇ ಇದ್ದಾಗ ಮತ್ತೊಂದು ಕೀ ಬಳಸಿ ಬಾಗಿಲು ತೆರೆದು ಒಳಗೆ ಹೋದಾಗ ಬಿಂದು ಸೀರೆಯಿಂದ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸೀರೆ ತೆರವುಗೊಳಿಸಿ ಕೊಂಚ ಉಸಿರಾಡುತ್ತಿದ್ದ ಗಮನಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.
