ಚೊಚ್ಚಲ ಮಳೆಗೆ ನೆಲಕಚ್ಚಿದ ಬೆಳೆ ! ರೈತರ ಗೋಳು ಕೇಳೋರಿಲ್ಲ ಅಧಿಕಾರಿಗಳೇ ಇಲ್ನೋಡಿ.

Spread the love

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ಬಿರುಗಾಳಿ ಮಳೆಗೆ ನೆಲಕ್ಕೆರಗಿದ ಬಾಳೆ ತೋಟ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತು ರೈತರಿಗೆ ಮೀಸಲು ಎನ್ನುವಂತಾಗಿದೆ. ರೈತರ ನೋವು, ಸಂಕಷ್ಟಕ್ಕೆ ಅಂತ್ಯವೇ ಇಲ್ಲವೆ? ಇನ್ನೇನು ಈ ಬಾರಿ ಒಳ್ಳೆಯ ಬೆಳೆ ಬಂದಿದೆ. ಲಕ್ಷಾಂತರ ರೂಗಳ ಲಾಭ ಗಳಿಸಿ ಸಾಲಮುಕ್ತರಾಗೋಣ ಎನ್ನುವಷ್ಟರಲ್ಲಿ ರಾತ್ರೋರಾತ್ರಿ ಬಾಳೆ ಬೆಳೆ ನೆಲಕ್ಕೆ ಬಿದ್ದು ಕನಸು ನುಚ್ಚು ನೂರಾಗಿದೆ ಎಂದು ತಂಬ್ರಹಳ್ಳಿ ಬಾಳೆ ಬೆಳೆಗಾರ ಪ್ರಭುರಡ್ಡಿ ಕಣ್ಣಂಚಿನಲಿ ಕಣ್ಣೀರಿಟ್ಟು ನಿಟ್ಟುಸಿರು ಬಿಟ್ಟಿದ್ದಾರೆ.

ಮಾ.17 ರಂದು ರಾತ್ರಿ ಮುಂಗಾರು ಪೂರ್ವ ಮಳೆಗೆ ಬೀಸಿದ ಬಿರುಗಾಳಿಗೆ ತಾಲೂಕಿನ ತಂಬ್ರಹಳ್ಳಿ ಭಾಗದಲ್ಲಿ ಅನೇಕ ಬೆಳೆಗಳು ನೆಲಕ್ಕೆರಗಿ ಲಕ್ಷಾಂತರ ರೂಗಳಷ್ಟು ರೈತರಿಗೆ ನಷ್ಟ ಅನುಭವಿಸಿದ ಘಟನೆ ನಡೆದಿದೆ.

ತಂಬ್ರಹಳ್ಳಿ ಬಾಳೆ ಬೆಳೆಗಾರ ರೈತ ಪ್ರಭುರಡ್ಡಿ ಅವರ 2 ಎಕರೆ ಏಲಕ್ಕಿ ಬಾಳೆ ತೋಟ ಸಂಪೂರ್ಣ ನೆಲಕ್ಕುರುಳಿದೆ. ಇವರು ಲಕ್ಷಾಂತರ ಹಣ ವ್ಯಯಿಸಿ ಸುಮಾರು 2400 ಬಾಳೆ ಗಿಡಗಳನ್ನು ಬೆಳೆಸಿದ್ದರು. ನಿನ್ನೆ ದಿನ ಒಂದೂವರೆ ಟನ್ ಗಳಷ್ಟು ಏಲಕ್ಕಿ ಬಾಳೆ ಕಟಾವು ಮಾಡಿ ಸುಮಾರು 50 ಸಾವಿರ ಆದಾಯ ಗಳಿಸಿದ್ದರು. ಇನ್ನೊಂದು ವಾರ ಬಿಟ್ಟು ಸಂಪೂರ್ಣ ಕಟಾವು ಮಾಡಿಸಿದರಾಯಿತು ಅಂತಾ ಬಿಟ್ಟರೆ, ಅಂದಾಜು 6 ಲಕ್ಷ ರೂ ಲಾಭ ಗಳಿಸುವ ಬೆಳೆ ನೆಲಕ್ಕೆ ಬಿದ್ದು ಹಾನಿಯಾಗಿರುವುದು ತುಂಬಾ ನೋವು ತಂದಿದೆ ಎಂದು ಅಳಲು ವ್ಯಕ್ತಪಡಿಸಿದರು.

ವಿಪರೀತ ಗಾಳಿ ಬೀಸಿದ ಕಾರಣ ಬಹುತೇಕ ಎಲ್ಲಾ ಗಿಡಗಳು ಕಟಾವಿಗೆ ಸಿದ್ದವಿದ್ದ ಬಾಳೆ ಗೊನೆಗಳು ನೆಲಕ್ಕುರುಳಿವೆ.

ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಹಳ್ಳಿಗಳಲ್ಲಿ ಹಿಂಗಾರಿನಲ್ಲಿ ಬೆಳೆದ ರಾಗಿ ಬೆಳೆ ಸಹ ನೆಲಕಚ್ಚಿವೆ. ಮುಂಗಾರು ಪೂರ್ವ ಮಳೆ ಹಾಗೂ ಬಿರುಗಾಳಿಯಿಂದ ನಷ್ಟವಾಗಿರುವ ಕುರಿತು ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ. ಇಂತಹ ಅಕಾಲಿಕ ಪ್ರಕೃತಿ ವಿಕೋಪದಿಂದ ಬಹುತೇಕ ರೈತರಿಗೆ ಆರ್ಥಿಕ ನಷ್ಟವಾಗಿದ್ದು,ರಾಜ್ಯ ಸರ್ಕಾರ ತಕ್ಷಣವೇ ಸಮೀಕ್ಷೆ ನಡೆಸಿ ನಷ್ಟ ಪರಿಹಾರ ನೀಡಲು ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *