ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಬ್ರಹ್ಮನು ಸೃಷ್ಟಿಯನ್ನು ಸೃಷ್ಟಿಸಿದ ದಿನ ಯುಗಾದಿ ಹಬ್ಬ ಆಚರಣೆ ಆಗಿರುವುದರಿಂದ ಹಿಂದೂ ಜನ ಜಾಗೃತಿ ಸಮಿತಿಯಿಂದ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಬ್ರಹ್ಮ ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಸಂಕಲ್ಪ, ಹೊಸ ವರ್ಷಾಚರಣೆಯನ್ನು ನಡೆಸಲಾಯಿತು.
ಪಟ್ಟಣದ ಪತ್ರಿ ಬಸವೇಶ್ವರ ದೇವಾಲಯ, ಅಂಭಾ ಭವಾನಿ ದೇವಾಲಯ, ಪಾಂಡುರಂಗ ದೇವಾಲಯ, ಬನಶಂಕರಿ ದೇವಾಲಯ ಹಾಗೂ ಗಣೇಶ ದೇವಾಲಯಗಳಲ್ಲಿ ಬ್ರಹ್ಮ ಧ್ವಜ ಏರಿಸುವ ಮೂಲಕ ರಾಮ ರಾಜ್ಯ ಸ್ಥಾಪನೆಗೆ ಸಂಕಲ್ಪ ಮಾಡಲಾಯಿತು.
ಧರ್ಮ, ಪಾವಿತ್ರ್ಯತೆ ಮತ್ತು ಜಯದ ಸಂಕೇತವಾಗಿರುವ ಬ್ರಹ್ಮಧ್ವಜವನ್ನು ಯುಗಾದಿಯ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ಲಹರಿಗಳು ಭೂಮಿಯ ಮೇಲೆ ಹೆಚ್ಚು ಬರುತ್ತವೆ. ಆ ಲಹರಿಗಳು ಕಲಶದ ಮೂಲಕ ನಮ್ಮ ಮನೆಯೊಳಗೆ ಪ್ರವೇಶಿಸಿ ವರ್ಷಪೂರ್ತಿ ಅದರ ಲಾಭ ನಮಗೆ ಸಿಗುವುದರ ಕಾರಣ ಬ್ರಹ್ಮ ಧ್ವಜವನ್ನು ಏರಿಸಲಾಗುತ್ತದೆ.
500 ವರ್ಷಗಳ ತಪಸ್ಸಿನ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣವಾಗಿದೆ. ಅದರಂತೆ ಭಾರತದಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯಾಗುವ ತನಕ ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಸಮಾಜ ಎದುರಿಸುತ್ತಿರುವ ಅಪಮಾನ, ಅತ್ಯಾಚಾರ, ಮತಾಂತರದ ವಿರುದ್ಧ ಹೋರಾಡುವುದು ಅವಶ್ಯಕವಾಗಿದೆ ಮತ್ತು ಸನಾತನ ಧರ್ಮದ ಜೀವಾಳವಾಗಿರುವ ದೇವಸ್ಥಾನಗಳ ರಕ್ಷಣೆ ಮತ್ತು ಅಲ್ಲಿ ಸಂಸ್ಕೃತಿ ಪರಂಪರೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಮೂಹಿಕವಾಗಿ ಪ್ರತಿಜ್ಞೆಯನ್ನು ಮಾಡಲಾಯಿತು.
ಈ ವೇಳೆ ಸಮಿತಿಯ ಪೂಜಾ ಶ್ರೀಕಾಂತ್, ಅಕ್ಕಿ ಬಸವರಾಜ್, ಪಂಪಾಪತಿ, ಅಕ್ಕಿ ಲಲಿತಾ, ಪಲ್ಲವಿ, ರೂಪ, ಶಿವಾನಂದ, ಜೋಗಿ ರಾಮಣ್ಣ, ಪಾಂಡುರಂಗ, ಶಿವಯೋಗಿ ಇತರರಿದ್ದರು.

