ಜನಮನ ಸೆಳೆದ ಮೋಡಿಕಾರ ಆಟ, ಹಂಪಾಪಟ್ಟಣದಲ್ಲಿ ಪುರಾತನ ಜನಪದ ಕಲೆ ಜೀವಂತಿಕೆ.

Spread the love

 

ಜನಮನ ಸೆಳೆದ ಮೋಡಿಕಾರ ಆಟ. ಹಂಪಾಪಟ್ಟಣದಲ್ಲಿ ಪುರಾತನ ಜನಪದ ಕಲೆ ಜೀವಂತಿಕೆ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣ ಗ್ರಾಮದಲ್ಲಿ ಜನಪದ ಗ್ರಾಮೀಣ ಪರಂಪರೆಯ ಪದ್ಧತಿಯಂತೆ ಪ್ರತಿ ವರ್ಷದಂತೆ ಯುಗಾದಿಯ ಪಾಡ್ಯದ ಮರುದಿನ ಮೋಡಿಕಾರ ಆಟವನ್ನು ಗ್ರಾಮದ ಮೋಡಿ ಆಟದ ಕಲಾವಿದರು ಯಶಸ್ವಿಯಾಗಿ ಪ್ರದರ್ಶನ ನೀಡಿದರು.

ಮೋಡಿ ಆಟವು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ, ವಿಶೇಷವಾಗಿ ಹಬ್ಬ-ಹರಿದಿನಗಳಲ್ಲಿ ಕಂಡುಬರುವ ಪುರಾತನ ಜನಪದ ಕಲೆಯಾಗಿದೆ. ಇದು ‘ಕೈಚಳಕ’ ಮತ್ತು ‘ಕಣ್ಣುಕಟ್ಟು’ (ಮಂತ್ರದಂಡದ ಸಹಾಯದಿಂದ ಮಾಟ-ಮಂತ್ರದಂತೆ) ಪ್ರದರ್ಶಿಸುವ ರೋಮಾಂಚಕಾರಿ ಆಟವಾಗಿದ್ದು, ನಿಂಬೆಹಣ್ಣು, ಸೂಜಿ, ಮತ್ತು ಕುಂಬಳಕಾಯಿ ಬೀಜಗಳನ್ನು ಬಳಸಿ, ಮಂಡಲ ಬರೆದು ಅದರಲ್ಲಿರುವ ವಸ್ತುಗಳನ್ನು ಹುಡುಕಿ ತರುವ ಸ್ಪರ್ಧೆಯಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಎಲ್ಲಿಯೂ ನಡೆಯದ ಈ ಮೋಡಿ ಆಟ ಹಂಪಾಪಟ್ಟಣ ಗ್ರಾಮದಲ್ಲಿ ಈಗಲೂ ಜೀವಂತಿಕೆಯಿಂದ ಆಚರಣೆ ನಡೆಯುತ್ತಿರುವುದು ವಿಶೇಷ.

ಗ್ರಾಮದ ಪ್ರಮುಖ ಬೀದಿಯಲ್ಲಿ ರಂಗು ರಂಗಿನ ಐದು ಚೌಕಟ್ಟನ್ನು ನಿರ್ಮಿಸಿ ಅದರೊಳಗೆ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಿ ಐದು ರಂಗದ ಒಳಗೆ ಹೋಳಿಗೆ, ರೊಟ್ಟಿ, ಸಂಡಿಗೆ, ಹಪ್ಪಳ ಹಾಗೂ ತಿಂಡಿ ತಿನಿಸುಗಳ ಇಟ್ಟು ಮೋಡಿಕಾರ ಆಟಕ್ಕೆ ಎಲ್ಲರೂ ಅಣಿಯಾಗುತ್ತಾರೆ. ನಂತರ ಆಟದ ಪ್ರತಿವಾದಿಗಳನ್ನು ಕರೆತರಲು ಹಲಗೆ ವಾದನದ ಮೂಲಕ ಐದು ಜನ ಮೋಡಿಗಾರ ಆಟಗಾರರನ್ನು ಮೆರೆವಣಿಗೆಯ ಮೂಲಕ ಸ್ವಾಗತಿಸುತ್ತಾರೆ. ನಂತರ ಶಕ್ತಿ ದೇವತೆಯ ಆರಾಧಕನನ್ನು ರಂಗಮಂಟಪಕ್ಕೆ ಕರೆ ತಂದು ದೇವಿಗೆ ಪೂಜಿಸುವ ಮೂಲಕ ಆಟವನ್ನು ಆರಂಭಿಸುತ್ತಾರೆ. ಪ್ರತಿವಾದಿಗಳು ತಮ್ಮ ತಂತ್ರಗಳ ಮೂಲಕ ತಮ್ಮ ಶಕ್ತಿಯ ಮೂಲಕ ಜನರನ್ನೂ ರಂಜಿಸುತ್ತ ತಮ್ಮ ಪರಾಕ್ರಮದ ಮೂಲಕ ಹಲಗೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ರಂಗ ಮಂಟಪದ ಮೇಲೆ ವಸ್ತುಗಳನ್ನು ಕದಿಯಲು ಬರುತ್ತಾರೆ. ರಂಗ ಮಂಟಪದ ಶಕ್ತಿ ದೇವತೆಯ ಆರಾಧಕ ಮೈಮೇಲೆ ದೇವತೆಯನ್ನು ಆಹ್ವಾನಿಸಿಕೊಂಡು ಬೇವಿನ ತಪ್ಪಲನ್ನು ಹಿಡಿದುಕೊಂಡು ತನ್ನ ವಿವಿಧ ಮಜುಲುಗಳನ್ನು ಪ್ರದರ್ಶನ ನೀಡುತ್ತಾರೆ. ತಂತ್ರ ಮಂತ್ರಗಳ ಮೂಲಕ ಬೂದಿ, ಬೇವಿನ ಸೊಪ್ಪುಗಳ ಮೂಲಕ ಪ್ರತಿವಾದಿಗಳನ್ನು ಎದುರಿಸಿ ಹಿಮ್ಮೆಟ್ಟಿಸುವ ಪ್ರದರ್ಶನ ನೀಡಿದರು. ಇದೇ ರೀತಿಯಾಗಿ ರಂಗಮಂಟಪದ ಮೇಲಿರುವ ವಸ್ತುಗಳನ್ನು ಕದಿಯುತ್ತಾ ಕದಿಯುತ್ತ. ದೇವಿಯ ಆರಾಧಕ ಶಕ್ತಿಯನ್ನು ತೋರಿಸುತ್ತಾ ವಿವಿಧ ಬಗೆಯ ಮಜುಲುಗಳನ್ನು ಜನರಿಗೆ ಮನರಂಜನೆ ನೀಡುತ್ತಾರೆ.

ಈ ಹಬ್ಬದ ವಿಶೇಷ ಏನೆಂದರೆ ಗ್ರಾಮಕ್ಕೆ ಕಾಲ ಕಾಲಕ್ಕೆ ಮಳೆ ಬೆಳೆ ಆಗಲಿ, ಗ್ರಾಮದ ಸರ್ವಸಮಾಜದವರಿಗೆ ಒಳಿತಾಗಲಿ, ಗ್ರಾಮದಲ್ಲಿ ಕಳ್ಳತನ, ರೋಗಭಾದೆಗಳು, ಅನಾರೋಗ್ಯ ಕಾಡದಿರಲಿ. ಸರ್ವರಲ್ಲಿ ಶಾಂತಿ ಸೌಹಾರ್ದತೆ ನೆಮ್ಮದಿ, ಐಕ್ಯತೆಯಿಂದ ಬದುಕು ಸಾಗಿಸಲಿ ಎಂಬುದು ಮುಖ್ಯ ಆಶಯವಾಗಿದೆ.

ಇಲ್ಲಿ ಯಾವುದೇ ಮೌಡ್ಯಕ್ಕೆ ಆದ್ಯತೆ ನೀಡದೆ.
ಗ್ರಾಮದ ಜನರನ್ನು ಮನರಂಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಮೋಡಿ ಆಟದ ಕಲಾವಿದ ಹೆಚ್.ಫಕೀರಪ್ಪನವರು ಅಭಿಪ್ರಾಯ ಪಡುತ್ತಾರೆ.

ಈ ಪ್ರದರ್ಶನದಲ್ಲಿ ಮೋಡಿ ಕಲಾವಿದರಾದ ಕರ್ಕಟ್ಟಿ ನಾಗರಾಜ, ಚಂದ್ರಪ್ಪ, ತಿಂದಪ್ಪ, ವಟ್ಟಮ್ಮನಹಳ್ಳಿ ಮಂಜುನಾಥ, ಟಿ.ಹನುಮಂತಪ್ಪ , ದೇವಿ ಆರಾಧಕ ಬಡಿಗೇರ್ ಪಂಪಣ್ಣ, ಕಂಬಾರ ಹುಲ್ಲೇಶ್, ಹಲಗೆ ವಾದಕ ಹೆಚ್.ಹುಲಗಪ್ಪ, ಹೆಚ್.ನಿಂಗಪ್ಪ. ಹೆಚ್.ದುರ್ಗಪ್ಪ, ಪೂಜಾರಿ ಹುಲುಗಪ್ಪ ಮೋಡಿ ಆಟದಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.

ಈ ವೇಳೆ ಗ್ರಾಮದ ಹೆಚ್.ಸೋಮನಾಥ, ಸೀಗೇನಹಳ್ಳಿ ಬಸವರಾಜ್, ಬಂಟರ ಕುಬೇರ, ಡಿಶ್ ಹನುಮಂತ, ಹುಲುಗಪ್ಪ, ಬಲ್ಲಪ್ಪ ಸೇರಿದಂತೆ ಇತರರಿದ್ದರು. ಗ್ರಾಮದ ನೂರಾರು ಜನರು ಮೋಡಿ ಆಟ ಕಣ್ತುಂಬಿಕೊಂಡು ಸಂಭ್ರಮಿಸಿದರು.

Leave a Reply

Your email address will not be published. Required fields are marked *