♦ ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ:
♦ ಹಂಪಿ, ಮೈಸೂರು ಹಾಗೂ ಲಕ್ಕುಂಡಿ ತಾಣಗಳ ಅಭಿವೃದ್ಧಿಗೆ ಬೃಹತ್ ಯೋಜನೆ,
♦ ಖಾಸಗಿ ಸಹಭಾಗಿತ್ವ ಹಾಗೂ ವಾಯು-ರೈಲು ಸಂಪರ್ಕ ಸುಧಾರಣೆಯೊಂದಿಗೆ ರಾಜ್ಯದ 50 ಪ್ರವಾಸಿ ತಾಣಗಳಿಗೆ ಕಾಯಕಲ್ಪ.
ಪ್ರವಾಸೋದ್ಯಮ ಸಚಿವ : ಸಚಿವ ಕೆ.ಜೆ.ಜಾರ್ಜ್ ಹೇಳಿಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ (ವಿಜಯನಗರ).
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 50 ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ ಐತಿಹಾಸಿಕ ತಾಣಗಳಾದ ಹಂಪಿ, ಮೈಸೂರು ಮತ್ತು ಲಕ್ಕುಂಡಿ ಕ್ಷೇತ್ರಗಳನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ತೀವ್ರ ಸಿದ್ಧತೆ ನಡೆಸಿದೆ. ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಬೆಳವಣಿಗೆಗೆ ಖಾಸಗಿ ಸಹಭಾಗಿತ್ವ ಅತ್ಯಗತ್ಯ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಹೊಸ ಮಲಪನಗುಡಿಯಲ್ಲಿನ ಹೆರಿಟೇಜ್ ರೆಸಾರ್ಟ್ನಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗ್ಲೋಬಲ್ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಯೋಜನೆಯಡಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಕುರಿತು ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾಗತಿಕ ಪ್ರವಾಸಿ ತಾಣಗಳ ಪಟ್ಟಿಗೆ ಕರ್ನಾಟಕದಿಂದ ಮೂರು ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದೆ. ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣವಾಗಿರುವುದರಿಂದ ಹಂಪಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಇದನ್ನು ಭಾರತದ ಪ್ರವಾಸೋದ್ಯಮದ ಪ್ರಮುಖ ಹೆಗ್ಗುರುತನ್ನಾಗಿ ರೂಪಿಸಲಾಗುವುದು. ಈಗಾಗಲೇ ಸಾಂಸ್ಕೃತಿಕ ರಾಜಧಾನಿಯಾಗಿ ಚಿರಪರಿಚಿತವಿರುವ ಮೈಸೂರನ್ನು ಮತ್ತಷ್ಟು ಆಧುನಿಕ ಸೌಲಭ್ಯಗಳೊಂದಿಗೆ ಪ್ರವಾಸೋದ್ಯಮದ ಬೃಹತ್ ಹಬ್ ಆಗಿ ಬಲಪಡಿಸಲಾಗುವುದು. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯಿಂದ ವ್ಯಾಪಕ ಉತ್ಖನನ ಕಾರ್ಯಗಳು ನಡೆಯುತ್ತಿದ್ದು, ಕಲ್ಯಾಣಿ ಚಾಲುಕ್ಯರ ಶೈಲಿಯ ಲಕ್ಕುಂಡಿ ತಾಣವನ್ನು ಭವಿಷ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಹಂಪಿ ಸೇರಿದಂತೆ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಜಿಲ್ಲಾಡಳಿತ, ರಾಜ್ಯ ಪುರಾತತ್ವ ಇಲಾಖೆ ಮತ್ತು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳ ನಡುವಿನ ಆಡಳಿತಾತ್ಮಕ ವಿಳಂಬವನ್ನು ತಪ್ಪಿಸಲು, ಡೆಸ್ಟಿನೇಶನ್ ಮ್ಯಾನೇಜ್‌ಮೆಂಟ್ ಆರ್ಗನೈಸೇಶನ್ ರಚಿಸುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇದು ಪ್ರವಾಸೋದ್ಯಮ ಉದ್ಯಮದ ಹೂಡಿಕೆದಾರರಿಗೆ ಹಾಗೂ ಪ್ರವಾಸಿಗರಿಗೆ ಎದುರಾಗುವ ಗೊಂದಲಗಳ ನಿವಾರಿಸಲಿದೆ.
ಪ್ರವಾಸಿಗರ ಸುಗಮ ಸಂಚಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರ ಜತೆಗೆ ಹೊಸಪೇಟೆ, ಬಳ್ಳಾರಿ ಭಾಗದ ಜಿಂದಾಲ್ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲು ಸೂಕ್ತ ಕ್ರಮ ವಹಿಸಲಾಗುವುದು. ಇದರೊಂದಿಗೆ, ದೇಶದ ಪ್ರಮುಖ ನಗರಗಳಿಂದ ಕರಾವಳಿ ಮತ್ತು ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಖಾಸಗಿ ವಲಯದೊಂದಿಗೆ ಸಹಭಾಗಿತ್ವ :
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ. ಕೆಎಸ್‌ಟಿಡಿಸಿ ಮತ್ತು ಜಂಗಲ್ ಲಾಡ್ಜಸ್ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿದ್ದರೂ, ಖಾಸಗಿ ಹೂಡಿಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಪ್ರವಾಸೋದ್ಯಮದ ಕ್ರಿಯಾತ್ಮಕ ಬದಲಾವಣೆ ಸಾಧ್ಯವಿಲ್ಲ. ಸರ್ಕಾರ ಮತ್ತು ಖಾಸಗಿ ಪಾಲುದಾರರು ಒಟ್ಟಾಗಿ ಒಂದು ತಂಡವಾಗಿ ಕೆಲಸ ಮಾಡಿ ಕರ್ನಾಟಕದ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಬೇಕಿದೆ ಎಂದರು.
ಹೆರಿಟೇಜ್ ವಾಕ್ ಮೂಲಕ ಹಂಪಿ ವೈಭವ ವೀಕ್ಷಣೆ :
ಶಾಸಕ ಹೆಚ್.ಆರ್. ಗವಿಯಪ್ಪ ಮಾತನಾಡಿ, ಹಂಪಿಯ ಸುಮಾರು 1200ಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಂತೆ ಪ್ರವಾಸಿಗರಿಗಾಗಿ ಸುಸಜ್ಜಿತವಾದ 15.4 ಕಿ.ಮೀ ಉದ್ದದ ಪ್ರದಕ್ಷಿಣಾ ಪಥ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹೆರಿಟೇಜ್ ವಾಕ್ ಮೂಲಕ ಪ್ರವಾಸಿಗರಿಗೆ ಹಂಪಿಯ ವೈಭವವನ್ನು ಹತ್ತಿರದಿಂದ ವೀಕ್ಷಿಸಲು ಅನುಕೂಲವಾಗಲಿದೆ. ಹಂಪಿ ಸ್ಮಾರಕಗಳ ದೀರ್ಘಾವಧಿ ರಕ್ಷಣೆಗಾಗಿ ಭಾರತೀಯ ಪುರಾತತ್ವ ಸಮೀಕ್ಷೆ ಸಹಯೋಗದೊಂದಿಗೆ ವೈಜ್ಞಾನಿಕ ದಸ್ತಾವೇಜೀಕರಣ ಮತ್ತು ಡಿಜಿಟಲ್ ಪ್ರಿಸರ್ವೇಶನ್ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಹಂಪಿ ಮತ್ತು ಬಳ್ಳಾರಿ ರೈಲ್ವೆ ನಿಲ್ದಾಣಗಳನ್ನು ಪಾರಂಪರಿಕ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಹಂಪಿ ನಿಲ್ದಾಣಕ್ಕೆ ವಿಶ್ವಪ್ರಸಿದ್ಧ ಶ್ರೀ ವಿರೂಪಾಕ್ಷ ದೇವಸ್ಥಾನದ ಶೈಲಿಯ ಪಾರಂಪರಿಕ ನೋಟ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ. ಕಮಲಾಪುರದ ಐತಿಹಾಸಿಕ ಕೆರೆಯ ಸೌಂದರ್ಯೀಕರಣಕ್ಕಾಗಿ ಕೆರೆಯ ಸುತ್ತಲೂ ಸಂಪೂರ್ಣವಾಗಿ ಒಂದು ಪ್ರವಾಸಿ ಸರ್ಕ್ಯೂಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅದಷ್ಟೇ ಅಲ್ಲದೇ ಪ್ರವಾಸಿಗರಿಗೆ ಹಂಪಿಯ ಸಮಗ್ರ ಐತಿಹಾಸಿಕ ಮಾಹಿತಿ ನೀಡಲು ಅಂತರರಾಷ್ಟ್ರೀಯ ಗುಣಮಟ್ಟದ ಇಂಟರ್‌ಪ್ರಿಟೇಷನ್ ಸೆಂಟರ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕಾಲೇಜು ಆರಂಭಿಸುವ ಪ್ರಸ್ತಾವನೆ ಸಲ್ಲಸಿಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ :
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಪ್ರವಾಸೋದ್ಯಮದ ಜಾಗತಿಕ ಗುಣಮಟ್ಟದಲ್ಲಿ ಕಾಂಬೋಡಿಯಾ ಅಥವಾ ಶ್ರೀಲಂಕಾದಂತಹ ದೇಶಗಳಿಗೆ ಹೋಲಿಸಿದರೆ ನಾವು ಹಿಂದುಳಿದಿದ್ದು, ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಕಡತಗಳು ವಿಳಂಬವಾಗುತ್ತಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ತಕ್ಷಣವೇ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಬೇಕು ಎಂದರು.
ಪ್ರಸ್ತುತ ಹಂಪಿಯ ಹೋಟೆಲ್ ಹಾಗೂ ಪ್ರವಾಸೋದ್ಯಮ ಉದ್ಯಮಗಳಲ್ಲಿ ಹೊರರಾಜ್ಯದವರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದು, ಸ್ಥಳೀಯ ಗ್ರಾಮೀಣ ಯುವಕರಿಗೆ ಉದ್ಯೋಗ ಸಿಗುವಂತಾಗಲು ಕೌಶಲ್ಯ ತರಬೇತಿ ಕೇಂದ್ರವನ್ನು ಆರಂಭಿಸಬೇಕು. ಹಂಪಿ, ಕಮಲಾಪುರ ಸೇರಿದಂತೆ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಿಂದುಳಿದ ಹಳ್ಳಿಗಳಲ್ಲಿ ಬಯಲು ಶೌಚ ಮುಕ್ತ ಪರಿಸರ ನಿರ್ಮಾಣ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸಲು ಲಭ್ಯವಿರುವ ಅನುದಾನವನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಜಂಟಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಸಿಂಗ್, ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಸುವಾಸಿಶ್ ದಾಸ್, ಪ್ರವಾಸೋದ್ಯಮ ಇಲಾಖೆ ಆಯುಕ್ತ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
