ಹೊಸಪೇಟೆಯಲ್ಲಿ ಉಪ ಲೋಕಾಯುಕ್ತ ನ್ಯಾ. ವೀರಪ್ಪ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ.

Spread the love

ತ್ಯಾಗಭೂಮಿ ಡಿಜಿಟಲ್‌ ಡೆಸ್ಕ್, ವಿಜಯನಗರ.

ಹೊಸಪೇಟೆ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶನಿವಾರ ಹೊಸಪೇಟೆ ನಗರದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

​ಎಪಿಎಂಸಿಯಲ್ಲಿ ರೈತರ ಕುಂದುಕೊರತೆ ಆಲಿಕೆ:

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಗೆ ಭೇಟಿ ನೀಡಿದ ಅವರು, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ತೂಕದ ಮೋಸ, ಕಮಿಷನ್ ದಂದೆ ಹಾಗೂ ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತು ನೇರವಾಗಿ ರೈತರೊಂದಿಗೆ ಚರ್ಚಿಸಿದರು. ರೈತರಿಗೆ ಯಾವುದೇ ರೀತಿಯ ವಂಚನೆಯಾಗದಂತೆ ಪಾರದರ್ಶಕವಾಗಿ ವ್ಯವಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬಸ್ ನಿಲ್ದಾಣ ಪರಿಶೀಲನೆ:

ನಂತರ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಅಲ್ಲಿನ ಸ್ವಚ್ಛತೆ, ಶೌಚಾಲಯ ಹಾಗೂ ಲಗೇಜ್ ರೂಂಗಳನ್ನು ಪರಿಶೀಲಿಸಿದರು. ಉಪ ಲೋಕಾಯುಕ್ತರ ಭೇಟಿಯ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿತ್ತು. ಬಸ್ ನಿಲ್ದಾಣದ ಆವರಣದಲ್ಲಿರುವ ಬೇಕರಿಗಳು ಮತ್ತು ಕುಡಿಯುವ ನೀರಿನ ಬಾಟಲಿಗಳ ಗುಣಮಟ್ಟ ಹಾಗೂ ದರವನ್ನು ಅವರು ಸ್ವತಃ ತಪಾಸಣೆ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

​ಅಂಗನವಾಡಿ ಅಧಿಕಾರಿಗಳಿಗೆ ತರಾಟೆ:

ವಿಜಯನಗರ ಜಿಲ್ಲೆಯ ಹೊಸಪೇಟೆಯ ಚಿತ್ತವಾಡ್ಗಿ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ, ಮಕ್ಕಳಿಗೆ ಹಾಲಿನ ಪೌಡರ್ ವಿತರಿಸದಿರುವುದು ಕಂಡುಬಂದಿದ್ದಕ್ಕೆ ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

​ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತರಾಟೆ ತೆಗೆದುಕೊಂಡ ಅವರು, “ಸರ್ಕಾರದ ಲಕ್ಷಾಂತರ ಕೋಟಿ ರೂಪಾಯಿ ಹಣ ಹೇಗೆ ಬೇಕೋ ಹಾಗೆ ದುರ್ಬಳಕೆಯಾಗುತ್ತಿದೆ. ನೀವು ಸೂಕ್ತ ಸಮಯಕ್ಕೆ ಇಂಡೆಂಟ್ ಹಾಕಿಲ್ಲ ಎಂದು ನೆಪ ಹೇಳಿದರೆ ಹೇಗೆ? ಸಾರ್ವಜನಿಕರ ಹಣ ಸರಿಯಾದ ರೀತಿಯಲ್ಲಿ ತಲುಪಬೇಕು, ಕೇಂದ್ರದ ನಿರ್ವಹಣೆಯನ್ನು ತಕ್ಷಣವೇ ಸರಿಪಡಿಸಿಕೊಳ್ಳಿ” ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *