​ಪತ್ರಿಕಾರಂಗ ಪ್ರಜಾಪ್ರಭುತ್ವದ ಮುಖ್ಯ ಕಂಬ; ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮ ಅಗತ್ಯ: ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ.

Spread the love

ತ್ಯಾಗಭೂಮಿ ಡಿಜಿಟಲ್‌ ಡೆಸ್ಕ್, ವಿಜಯನಗರ.

​ಹೊಸಪೇಟೆ: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಷ್ಟೇ ಪ್ರಮುಖವಾಗಿ ಪತ್ರಿಕಾರಂಗವು ಸಮಾಜದ ನಾಲ್ಕನೇ ಕಂಬವಾಗಿ ಕಾರ್ಯಾಚರಿಸುತ್ತದೆ,” ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

​ನಗರದ ಶ್ರೀಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ನಿರ್ಮಾಣದಲ್ಲಿ ಪತ್ರಿಕಾರಂಗದ ಕೊಡುಗೆ ಅಪಾರ. ಸಮಾಜಕ್ಕೆ ನಿಖರ ಸುದ್ದಿಗಳನ್ನು ತಲುಪಿಸಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ರಾಜಕೀಯ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ಅಫಿಲಿಯೇಟ್ ಆಗದೆ, ಸ್ವತಂತ್ರ ಹಾಗೂ ನಿರ್ಭಯವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಿಷ್ಠಾವಂತ ಸುದ್ದಿಗಳು ಬರಲು ಸಾಧ್ಯ, ಎಂದರು.

​ವರದಿಗಾರರು ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಸತ್ಯ ಮತ್ತು ನಿಖರತೆಗೆ ಮೊದಲ ಆದ್ಯತೆ ನೀಡಬೇಕು. ಸುಳ್ಳು ವರದಿಗಳು ಸಮಾಜದ ಶಾಂತಿಯನ್ನು ಕದಡುತ್ತವೆ. ಯುವ ಪತ್ರಕರ್ತರು ತಮ್ಮ ವೃತ್ತಿಯನ್ನು ಪ್ರೀತಿಸಿ, ಆರಾಧಿಸಿ, ಆಸ್ತಿ ಮಾಡಲು ಅಥವಾ ಬ್ಲಾಕ್‌ಮೇಲ್ ಮಾಡಲು ಪತ್ರಿಕೋದ್ಯಮವನ್ನು ಬಳಸಿಕೊಳ್ಳಬಾರದು. ನಿಮ್ಮ ಲೋಗೋಗಳು ಗನ್‌ಗಳಂತೆ ಹಾಗೂ ಪೆನ್ನುಗಳು ಕತ್ತಿಯಂತೆ ಸತ್ಯದ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

​ಅಂಗನವಾಡಿ, ಆಸ್ಪತ್ರೆ ಹಾಗೂ ಸರ್ಕಾರಿ ಯೋಜನೆಗಳ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದ್ದು, ಸದಾ ಜಾಗೃತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಬಳಿಕ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು, ಕನ್ನಡ ಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ, ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಎಸ್.ಜಾಹ್ನವಿ, ವಾರ್ತಾಧಿಕಾರಿ ಧನಂಜಯಪ್ಪ, ಕಾನಿಪ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಸತ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ ವೇದಿಕೆಯಲ್ಲಿದ್ದರು.

ಬಳಿಕ ವೇದಿಕೆಯಲ್ಲಿ ಹಿರಿಯ ಪತ್ರಕರ್ತರ ಸೇವೆ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *