ಇಂದಿರಾ ಆವಾಸ್ ಯೋಜನೆ ಅನುದಾನ ದುರ್ಬಳಕೆ: ಗ್ರಾ.ಪಂ. ಅಧ್ಯಕ್ಷ, ಸದಸ್ಯ ಹಾಗೂ ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, ದಂಡ.

Spread the love

 

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.

ಹಗರಿಬೊಮ್ಮನಹಳ್ಳಿ : ಇಂದಿರಾ ಆವಾಸ್ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಬ್ಬಿಹಾಳು ಗ್ರಾಮ ಪಂಚಾಯತಿಯ ಅಧ್ಯಕ್ಷ, ಸದಸ್ಯ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 90,000 ರೂಪಾಯಿ ದಂಡ ವಿಧಿಸಿ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳವಾರ (ಜುಲೈ 28, 2026) ತೀರ್ಪು ನೀಡಿದೆ.
​ಶಿಕ್ಷೆಗೊಳಗಾದ ಆರೋಪಿಗಳು:

ವಸಂತರಾಜ್ – ಪಿಡಿಒ, ಮರಬ್ಬಿಹಾಳು ಗ್ರಾಮ ಪಂಚಾಯತಿ (ಆರೋಪಿ-02)
​ಹನುಮವ್ವ – ಸದಸ್ಯೆ, ಮರಬ್ಬಿಹಾಳು ಗ್ರಾಮ ಪಂಚಾಯತಿ (ಆರೋಪಿ-03)
ರಾಮಚಂದ್ರ ನಾಯ್ಕ – ಅಧ್ಯಕ್ಷರು, ಮರಬ್ಬಿಹಾಳು ಗ್ರಾಮ ಪಂಚಾಯತಿ (ಆರೋಪಿ-05)

ಪ್ರಕರಣದ ಹಿನ್ನೆಲೆ:

ವಿಜಯನಗರ ಲೋಕಾಯುಕ್ತ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ (ಸಂಖ್ಯೆ: 22/2016 / 01/2016) ಸಂಬಂಧಿಸಿದಂತೆ, ಹೊಸಪೇಟೆ ಲೋಕಾಯುಕ್ತ ವಿಭಾಗದ ಡಿವೈಎಸ್‌ಪಿ ಶ್ರೀ ಎನ್.ಆರ್. ಮಹಾಂತರೆಡ್ಡಿ ಅವರು ತನಿಖೆ ನಡೆಸಿದ್ದರು. ಆರೋಪಿಗಳು ಇಂದಿರಾ ಆವಾಸ್ ಯೋಜನೆಯ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.
​ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರ ಕಲಂ 13(1)(ಡಿ) ಸಹಿತ 13(2) ಹಾಗೂ ಭಾರತೀಯ ದಂಡ ಸಂಹಿತೆಯ (IPC) ಕಲಂ 420 (ವಂಚನೆ), 468 (ಸೃಷ್ಟಿಸಿದ ದಾಖಲೆ) ಮತ್ತು 471 (ನಕಲಿ ದಾಖಲೆ ಬಳಕೆ) ಅಡಿಯಲ್ಲಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

​ನ್ಯಾಯಾಲಯದ ತೀರ್ಪು:

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ, ಮೂವರೂ ಆರೋಪಿಗಳಿಗೆ ತಲಾ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹90,000/- ಗಳ ದಂಡ ವಿಧಿಸಿ ಆದೇಶಿಸಿದೆ.
​ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಜಯನಗರ ಜಿಲ್ಲಾ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರು (SPP) ಡಿ. ನಾರಾಯಣ ಅವರು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *