ಪದ್ಮಭೂಷಣ, ಕನ್ನಡದ ಸರ್ವಜ್ಞ ಡಾ.ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರ ಜನ್ಮದಿನ ಇಂದು.
ಅನಿಶ್ಚಿತತೆಯ ಬದುಕಿಗೆ ಡಿ.ವಿ.ಜಿ ದಿಕ್ಸೂಚಿ.
ಕೋಲಾರದ ಮುಳಬಾಗಿಲಿನಲ್ಲಿ ಮಾರ್ಚ್.17, 1887 ರಲ್ಲಿ ಜನಿಸಿದ ಡಾ.ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅವರು ‘ಡಿವಿಜಿ’ ಎಂತಲೇ ಜನಜನಿತ. ಕರ್ನಾಟಕದ ಅಧುನಿಕ ಸರ್ವಜ್ಞ ಎಂದೇ ಪ್ರಸಿದ್ದರಾದ ಇವರು ಕನ್ನಡದ ಅತ್ಯುನ್ನತ ಸಾಹಿತಿ, ಪತ್ರಕರ್ತ, ತತ್ವಜ್ಞಾನಿ, ಜೀವನ ಚರಿತ್ರೆಕಾರರು, ನಾಟಕಕಾರರು, ಚಿಂತಕರು ಮತ್ತು ವಿದ್ವಾಂಸರು. ಪತ್ರಿಕೋದ್ಯಮದಲ್ಲಿ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಮಹತ್ವವನ್ನು ಸಾರಿದವರು. ಇವರು ಮಂಕುತಿಮ್ಮನ ಕಗ್ಗದ ಮೂಲಕ ಜೀವನದ ತತ್ವಜ್ಞಾನವನ್ನು ಸರಳವಾಗಿ ಕನ್ನಡದಲ್ಲಿ ವಿವರಿಸಿದ ಅಗ್ರಗಣ್ಯ ಸಾಹಿತಿ. 1932 ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1974 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪಶಸ್ತಿ ನೀಡಿ ಗೌರವಿಸಿದೆ. ಗೋಖಲೆ ಸಾರ್ವಜನಿಕ ವಿಚಾರ ಸಂಸೆಯನ್ನು ಸ್ಥಾಪಿಸಿ ಸಾಹಿತ್ಯ ಮತ್ತು ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ಮತ್ತು ವಿಚಾರಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆ ಅಪಾರ. ಇವರ ಶ್ರೇಷ್ಠ ಕೃತಿ ‘ಮಂಕುತಿಮ್ಮನ ಕಗ್ಗ’ ಜೀವನದ ಏರಳಿತಗಳನ್ನು ಸಮಚಿತ್ತದಿಂದ ಎದುರಿಸಲು ಪ್ರೇರಣೆ ನೀಡುತ್ತದೆ.

“ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ” – ಈ ಮಾತು ಕೇಳದ ಕನ್ನಡಿಗನಿಲ್ಲ. ಆದರೆ ಇಂದಿನ ವೇಗದೂತ ಜಗತ್ತಿನಲ್ಲಿ, ತಂತ್ರಜ್ಞಾನದ ಅಬ್ಬರ ಮತ್ತು ಸೋಶಿಯಲ್ ಮೀಡಿಯಾದ ಸಂಭ್ರಮಗಳ ನಡುವೆ ಕಳೆದುಹೋಗುತ್ತಿರುವ ಯುವಜನತೆಗೆ ಈ ಸಾಲುಗಳು ಕೇವಲ ಕತೆಯಲ್ಲ. ಅದೊಂದು ಜೀವನದ ಔಷಧ.
ಇಂದಿನ ಯುವಪೀಳಿಗೆಗೆ ಎಲ್ಲವೂ ತಕ್ಷಣವೇ ಸಿಗಬೇಕು. ಯಶಸ್ಸು ಶೀಘ್ರವಾಗಿ ಬರಬೇಕು. ಸೋಲು ಎದುರಾದಾಗ ಸನ್ನದ್ಧವಾಗಿ ಎದುರಿಸಲು ದುರ್ಬಲಗೊಳ್ಳುವುದು ಸಹಜವಾಗಿದೆ. ಇಂತಹ ಮಾನಸಿಕ ಸಂಘರ್ಷದ ಕಾಲದಲ್ಲಿ. ಡಿ.ವಿ.ಗುಂಡಪ್ಪ ಅವರ ಬರಹಗಳು ಒಬ್ಬ ಆಪ್ತಮಿತ್ರನಂತೆ ಆತ್ಮ ವಿಶ್ವಾಸ ನೀಡಬಲ್ಲವು. ಡಿವಿಜಿಯವರ ಸಾಹಿತ್ಯ ಕೇವಲ ಹಳೆಯ ಕಾಲದ ಉಪದೇಶವಲ್ಲ; ಅದು ಆಧುನಿಕತೆಯ ಒತ್ತಡಕ್ಕೆ ಸಿಲುಕಿದ ಮನಸ್ಸನ್ನು ಹದಗೊಳಿಸುವ ‘ಜೀವನಧರ್ಮ ಯೋಗ’. ಅವರ ‘ಮಂಕುತಿಮ್ಮನ ಕಗ್ಗ’ ಇರಲಿ ಅಥವಾ ‘ಜ್ಞಾಪಕ ಚಿತ್ರಶಾಲೆ’ ಇರಲಿ, ಅವು ಯುವಜನತೆಗೆ ಕಲಿಸುವುದು ಒಂದೇ ಪಾಠ. “ಸಂಘರ್ಷಗಳ ನಡುವೆಯೂ ಸಮತೋಲನ ಕಾಯ್ದುಕೊಳ್ಳುವುದು ಹೇಗೆ?” ಎಂಬ ಕಲೆ. ಈ ಲೇಖನವು ಡಿವಿಜಿಯವರ ತತ್ವಗಳು ಇಂದಿನ 21ನೇ ಶತಮಾನದ ಯುವಕರ ವೃತ್ತಿಜೀವನ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಗೆ ಹೇಗೆ ಹೊಸ ಚೈತನ್ಯ ನೀಡಬಲ್ಲವು ಎಂಬುದನ್ನು ವಿಶ್ಲೇಷಿಸುತ್ತದೆ.
ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಬರಹಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ದಿಕ್ಸೂಚಿಗಳು. ಇಂದಿನ ಗೊಂದಲಮಯ ಜಗತ್ತಿನಲ್ಲಿರುವ ಯುವಜನತೆಗೆ ಅವರ ವಿಚಾರಗಳು ಅತ್ಯಂತ ಅವಶ್ಯಕ.
1. ಸಮಚಿತ್ತತೆ ಮತ್ತು ಮಾನಸಿಕ ನೆಮ್ಮದಿ :
ಸಮಚಿತ್ತತೆ : ಅಲೆಗಳ ನಡುವೆಯೂ ಅಚಲ. ಸಮಚಿತ್ತತೆ ಎಂದರೆ ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಸಮಚಿತ್ತದಿಂದ ಇರುವುದು. ಯುವಜನತೆಗೆ ಇಂದು ಬೇಕಾಗಿರುವುದು ಇದೇ ‘ಮಾನಸಿಕ ಬಲ’. ಸೋಲು ಅಂತ್ಯವಲ್ಲ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲು ಎಂಬುದು ಒಂದು ಪಾಠವೇ ಹೊರತು ಪೂರ್ಣವಿರಾಮವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಅನಿಶ್ಚಿತತೆಯ ಸ್ವೀಕಾರ: ಇಂದಿನ ವೇಗದ ಜಗತ್ತಿನಲ್ಲಿ ನಾಳೆ ಏನಾಗುತ್ತದೆ ಎಂಬ ಭರವಸೆ ಯಾರಿಗೂ ಇಲ್ಲ. ಉದ್ಯೋಗ, ಆರೋಗ್ಯ, ಸಂಬAಧಗಳು – ಎಲ್ಲದರಲ್ಲೂ ಅನಿಶ್ಚಿತತೆ ತಾಂಡವವಾಡುತ್ತಿದೆ. ಇಂತಹ ಸಮಯದಲ್ಲಿ ಮನಸ್ಸು ದಾರಿ ತಪ್ಪದಂತೆ, ಧೃತಿಗೆಡದಂತೆ ಕಾಯುವ ಶಕ್ತಿ ಡಿ.ವಿ.ಜಿ.ಯವರ ಬರಹಗಳಲ್ಲಿದೆ. ನಾಳೆ ಏನಾಗುವುದೋ ಎಂಬ ಆತಂಕಕ್ಕಿAತ, ಇಂದು ನನ್ನ ಕೈಲಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂಬ ಮನೋಭಾವವೇ ನೆಮ್ಮದಿಯ ಮೂಲ.
ಇಂದಿನ ಯುವಜನತೆ ಸೋಲು, ಅನಿಶ್ಚಿತತೆ ಮತ್ತು ಸ್ಪರ್ಧೆಯಿಂದಾಗಿ ಬೇಗನೆ ಕುಗ್ಗಿ ಹೋಗುತ್ತಿದ್ದಾರೆ. ಡಿವಿಜಿಯವರ “ಹುಲ್ಲು ಆಗು ಬೆಟ್ಟದಡಿ” ಎಂಬ ತತ್ವವು ಅತ್ಯಂತ ಪ್ರಸ್ತುತ. ಡಿವಿಜಿಯವರ ಈ ಸಾಲುಗಳು ಸೋಲನ್ನು ಎದುರಿಸುವ ಮತ್ತು ಅಹಂಕಾರವನ್ನು ತೊರೆಯುವ ಅದ್ಭುತ ಮಂತ್ರ :
“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿಗೂಡಿಸೆ ||
ಬೆಲ್ಲವಾಗು ದೀನರಿಗೆ, ಎಲ್ಲರೊಳಗೊಂದಾಗು |
ಮಂಕುತಿಮ್ಮ ||”
ಈ ತತ್ವವು ಇಂದಿನ ಯುವಕರಿಗೆ ಸಹಕಾರಿ :
ಹುಲ್ಲಾಗು ಬೆಟ್ಟದಡಿ – ಬೆಟ್ಟದ ಮೇಲೆ ಬೀಸುವ ಬಿರುಗಾಳಿಗೆ ದೊಡ್ಡ ಮರಗಳು ಉರುಳಿ ಬೀಳಬಹುದು, ಆದರೆ ಸಣ್ಣ ಹುಲ್ಲು ಬಗ್ಗುವ ಮೂಲಕ ಬದುಕುಳಿಯುತ್ತದೆ. ಅತಿಯಾದ ಅಹಂಕಾರ ಬಿಟ್ಟು ವಿನಯಶೀಲರಾಗಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಹುದು.
ಮನೆಗೆ ಮಲ್ಲಿಗೆಯಾಗು – ಮನೆಯವರಿಗೆ ಮತ್ತು ಸುತ್ತಮುತ್ತಲಿನವರಿಗೆ ಸುಗಂಧದAತಹ (ಸಂತೋಷ) ಪ್ರೀತಿಯನ್ನು ಹಂಚುವುದು.
ಕಲ್ಲಾಗು ಕಷ್ಟಗಳ ಮಳೆಯಲಿ – ಜೀವನದಲ್ಲಿ ಕಷ್ಟಗಳು ಎದುರಾದಾಗ ದೃತಿಗೆಡದೆ ಕಲ್ಲಿನಂತೆ ಧೀರವಾಗಿ ನಿಲ್ಲಬೇಕು.
ಬೆಲ್ಲವಾಗು ದೀನರಿಗೆ – ಪರರಿಗಾಗಿ ತುಡಿಯುವ ಗುಣವು ನಮ್ಮಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ, ಇದು ಮಾನಸಿಕ ನೆಮ್ಮದಿಗೆ ಪೂರಕ.
2. ಕರ್ತವ್ಯ ಮತ್ತು ನಿರಪೇಕ್ಷತೆ : ಯುವಜನತೆ ಹೆಚ್ಚಾಗಿ ಫಲಿತಾಂಶದ ಬಗ್ಗೆ ಚಿಂತಿಸುತ್ತಾರೆ. ಡಿವಿಜಿಯವರು ಭಗವದ್ಗೀತೆಯ ಸಾರವನ್ನು ‘ಜೀವನಧರ್ಮ ಯೋಗ’ದಲ್ಲಿ ಸರಳವಾಗಿ ನೀಡಿದ್ದಾರೆ.
• ಕರ್ತವ್ಯ ಡಿವಿಜಿಯವರ ಪ್ರಕಾರ, ಕರ್ತವ್ಯ ಎನ್ನುವುದು ಕೇವಲ ಕೆಲಸವಲ್ಲ, ಅದು ಒಂದು ‘ಯೋಗ’. ಫಲಿತಾಂಶದ ಮೇಲಿನ ಅತಿಯಾದ ವ್ಯಾಮೋಹವೇ ಮನುಷ್ಯನ ಅತೃಪ್ತಿಗೆ ಮೂಲ ಕಾರಣ. ಯುವಜನತೆ ಸೋಲಿಗೆ ಹೆದರುವುದು ಕೆಲಸ ಕಷ್ಟವೆಂದಲ್ಲ, ಬದಲಾಗಿ “ನಾನು ಅಂದುಕೊAಡ ಫಲ ಸಿಗದಿದ್ದರೆ ಸಮಾಜ ಅಥವಾ ಪೋಷಕರು ಏನೆಂದುಕೊAಡಾರು?” ಎಂಬ ಭಯದಿಂದ. ಡಿವಿಜಿಯವರು ಹೇಳುವಂತೆ, ನಮಗೆ ಅಧಿಕಾರವಿರುವುದು ಕೇವಲ ಪ್ರಯತ್ನದ ಮೇಲೆ ಮಾತ್ರ. ಫಲಿತಾಂಶವು ಹವಾಮಾನ, ಮಾರುಕಟ್ಟೆ ಅಥವಾ ಕಾಲದಂತಹ ಅನೇಕ ಬಾಹ್ಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
• ‘ನಿರಪೇಕ್ಷತೆ’ ಎಂದರೆ ಉದಾಸೀನತೆಯಲ್ಲ : ಅನೇಕರು ‘ನಿರಪೇಕ್ಷತೆ’ ಎಂದರೆ ಕೆಲಸದ ಬಗ್ಗೆ ಆಸಕ್ತಿ ಇಲ್ಲದಿರುವುದು ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ನಿಜವಾದ ನಿರಪೇಕ್ಷತೆ ಎಂದರೆ: ಕೆಲಸ ಮಾಡುವಾಗ ಪೂರ್ಣ ಗಮನವನ್ನು (100% ಈoಛಿus) ಆ ಕ್ಷಣದ ಮೇಲೆ ಇಡುವುದು. ಫಲಿತಾಂಶ ಯಾವುದಾದರೂ ಅದನ್ನು ಸಮಚಿತ್ತದಿಂದ ಸ್ವೀಕರಿಸುವ ಮಾನಸಿಕ ಸಿದ್ಧತೆ.
3. ಜೀವನಧರ್ಮಯೋಗದ ಪ್ರಸ್ತುತತೆ : ಡಿವಿಜಿಯವರು ಭಗವದ್ಗೀತೆಯ “ಕರ್ಮಣ್ಯೇವಾಧಿಕಾರಸ್ತೇ…” ಶ್ಲೋಕದ ಸಾರವನ್ನು ಯುವಕರಿಗೆ ಅರ್ಥವಾಗುವಂತೆ ಹೀಗೆ ವಿವರಿಸುತ್ತಾರೆ: “ನಾವು ಮಾಡುವ ಪ್ರತಿಯೊಂದು ಕೆಲಸವೂ ಲೋಕಸೇವೆಯ ಒಂದು ಭಾಗವೆಂದು ಭಾವಿಸಿದರೆ, ಅಲ್ಲಿ ಅಹಂಕಾರಕ್ಕೆ ಜಾಗವಿರುವುದಿಲ್ಲ. ಅಹಂಕಾರವಿಲ್ಲದ ಕಡೆ ಆತಂಕವಿರುವುದಿಲ್ಲ.”
ಕಷ್ಟಗಳು ಶಾಶ್ವತವಲ್ಲ, ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ ಎಂಬ ನಂಬಿಕೆಯನ್ನು ಅವರು ತಮ್ಮ ಕಗ್ಗಗಳ ಮೂಲಕ ಬಿತ್ತುತ್ತಾರೆ. “ತೆರೆ ತೇರೆಗೆ ಮುನ್ನೀರು ಹರಿವಂತೆ ಬಾರೆ ಕಷ್ಟಂಗಳ್” ಎಂದರೂ, ಅದನ್ನು ಈಜುವ ಧೈರ್ಯವನ್ನೂ ಅವರೇ ನೀಡುತ್ತಾರೆ.
ಹಡಗು ನಡುಗಡಲಿನಲ್ಲಿ ದಾರಿ ಕಾಣದೆ ತತ್ತರಿಸುವಾಗ ದಿಕ್ಸೂಚಿ ಹೇಗೆ ಸರಿಯಾದ ದಿಕ್ಕನ್ನು ತೋರಿಸುತ್ತದೆಯೋ, ಹಾಗೆಯೇ ಜೀವನದ ಸಂಕಷ್ಟಗಳು, ಗೊಂದಲಗಳು ಮತ್ತು ಅನಿಶ್ಚಿತತೆಗಳ ನಡುವೆ ಡಿ.ವಿ.ಜಿ.ಯವರ ಸಾಹಿತ್ಯ ನಮಗೆ ಸರಿಯಾದ ದಾರಿಯನ್ನು, ಬದುಕುವ ಅರ್ಥವನ್ನು ಮತ್ತು ಶಾಂತಿಯನ್ನು ತೋರಿಸುತ್ತದೆ. ಅವರ ಬರಹಗಳನ್ನು ಓದುವುದು ಎಂದರೆ ನಮ್ಮ ಜೀವನದ ದಿಕ್ಸೂಚಿಯನ್ನು ಸರಿಪಡಿಸಿಕೊಂಡAತೆ.

