Last Updated on March 4, 2026 by ASHOK UPPAR
ವಿಜೃಂಭಣೆಯಿಂದ ಜರುಗಿದ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ತಂಬ್ರಹಳ್ಳಿ.
ವರದಿ : ಯಲ್ಲಪ್ಪಗೌಡ ಪೂಜಾರ್.
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀ ಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಹಿನ್ನಲೆಯಲ್ಲಿ ಬೆಟ್ಟದಲ್ಲಿ ನೆಲೆಸಿರುವ ಶ್ರೀರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ವಂಶಪಾರಂಪರ್ಯ ಧರ್ಮಕರ್ತರ ಕುಟುಂಬದಿಂದ ಹಾಗೂ ಅರ್ಚಕರಿಂದ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ಜರುಗಿದವು. ಹೋಳಿ ಹುಣ್ಣಿಮೆಯ ದಿನ ಬೆಳಿಗ್ಗೆಯಿಂದಲೇ ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಡಾ.ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಜೆ ಸರ್ವಾಭರಣ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ಬೆಟ್ಟದಿಂದ ಕೆಳಗಡೆ ರಥ ಎಳೆಯುವ ಬೀದಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿದ ಬಳಿಕ ನಡೆದ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆಯಿತು. ಕೊಪ್ಪಳದ ರಂಗಪ್ಪ ಪೂಜಾರ ಇವರು 301101 ರೂಗಳಿಗೆ ಪಟಾಕ್ಷಿಯನ್ನು ಭಕ್ತಿಯಿಂದ ಪಡೆದುಕೊಂಡರು.

ವಿವಿಧ ಹೂವಿನ ಮಾಲೆಗಳಿಂದ ರಥವನ್ನು ಸುಂದರವಾಗಿ ಅಲಕಾಂರಗೊಳಿಸಲಾಗಿತ್ತು. ಬಾಳೆದಿಂಡು ಹಾಗೂ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲಕ್ಷ್ಮೀ.. ರಮಣಾ..ಗೋವಿಂದ… ಗೋವಿಂದಾ… ಎಂದು ನೆರದಿದ್ದ ಭಕ್ತರು ಜಯಘೋಷ ಮೊಳಗಿಸುತ್ತಿದ್ದಂತೆ ರಥೋತ್ಸವ ಮುಂದೆ ಚಲಿಸಿತು. ವಿವಿಧೆಡೆಯಿಂದ ಅಗಮಿಸಿದ ಭಕ್ತರು ಬಾಳೆಹಣ್ಣು, ಉತ್ತುತ್ತಿ ರಥಕ್ಕೆ ಎಸೆದು ಭಕ್ತಿಭಾವ ಮೆರೆದರು.
ರಥೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ರಥೋತ್ಸವ ನಿಮಿತ್ತ ತಂಬ್ರಹಳ್ಳಿಯ ಪೋಲಿಸ್ ಠಾಣೆಯ ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ನಿಯೋಜಿಸಿದ್ದರು.
