Last Updated on March 1, 2026 by ASHOK UPPAR
ವಿಜೃಂಭಣೆಯ ಶ್ರೀಬಂಡೇ ರಂಗನಾಥೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ತಂಬ್ರಹಳ್ಳಿ.
ವರದಿ : ಯಲ್ಲಪ್ಪಗೌಡ ಪೂಜಾರ್.
ಹಗರಿಬೊಮ್ಮನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಬಂಡೇ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಶ್ರೀರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀದೇವಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷದಂತೆ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ಈ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗುವುದು. ಇದೇ ಮಾರ್ಚ್ 03 ರಂದು ಹೋಳಿ ಹುಣ್ಣಿಮೆಯ ದಿನ ರಥೋತ್ಸವ ನಡೆಯಲಿದೆ. ಮಾ.04 ರಂದು ಬೇಟೆ ಗಿಡ ಉತ್ಸವ ನಡೆಯಲಿದೆ. ಈ ಕಲ್ಯಾಣೋತ್ಸವ ಕಾರ್ಯಕ್ರಮವು ಪಾಲ್ಗುಣ ಶುದ್ಧ ದಶಮಿಯಂದು ಬೆಟ್ಟದಲ್ಲಿ ರಂಗನಾಥೇಶ್ವರನಿಗೆ ಶ್ರೀದೇವಿ ಹಾಗೂ ಭೂದೇವಿಯರೊಟ್ಟಿಗೆ ನಡೆಯುವ ಈ ಕಲ್ಯಾಣೋತ್ಸವ ಕಾರ್ಯಕ್ರಮವು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಆಚರಣೆ ಮೂಲಕ ವೈಶಿಷ್ಟ್ಯತೆ ಪಡೆದಿದೆ. ಶ್ರೀ ಬಂಡೆ ರಂಗನಾಥೇಶ್ವರ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಬೆಟ್ಟಕ್ಕೆ ಹೋಗಿ ನಂದಿಸ್ಥಾಪನೆ, ಕಂಕಣಧಾರಣೆ, ಗರುಡ ಪೂಜೆ, ದೇವತಾರ್ಚನೆ ಸೇರಿದಂತೆ ವಿಶೇಷ ಅಭಿಷೇಕ ನೆರವೇರಿಸಿ ಸಂಭ್ರಮದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿಸಲಾಯಿತು.

ಈ ವೇಳೆ ಪೌರೋಹಿತ್ಯವನ್ನು ವೆಂಕೋಬರಾವ್, ವಂಶ ಪಾರಂಪರ್ಯ ಧರ್ಮಕರ್ತರಾದ ಶ್ಯಾನುಬೋಗರ ಉದಯ ಭಾಸ್ಕರ್ ಮನೆತನದವರು ಹಾಗೂ ವಿವಿಧ ಕಡೆಗಳಿಂದ ಆಗಮಿಸಿದ ಪುರೋಹಿತರಾದ ವಿನಾಯಕ್ ದಾಸ್, ಚಂದ್ರಶೇಖರ್ ಜೋಷಿ, ಚಿದಂಬರ್ ದೀಕ್ಷಿತ್, ಅರ್ಚಕರಾದ ಯಲ್ಲಪ್ಪ ಗೌಡ ಪೂಜಾರ್, ರಂಗನಾಥ ಪೂಜಾರ್ ಪಾಲ್ಗೊಂಡು ಈ ಕಲ್ಯಾಣೋತ್ಸವ ಆಚರಣೆಗೆ ಮೆರಗು ತಂದರು. ಎರಡೂ ಕಡೆಯಿಂದ ಪರಸ್ಪರ ಬೀಗರು ಇದ್ದರು. ಪುರೋಹಿತರ ವರ್ಗದವರ ವೇದ ಮಂತ್ರ ಜಯ ಘೋಷಗಳಿಂದ ಶ್ರೀಲಕ್ಷ್ಮೀ( ಶ್ರೀ ದೇವಿ ಭೂದೇವಿ) ಹಾಗೂ ರಂಗನಾಥೇಶ್ವರ ಸ್ವಾಮಿಗೆ ವಿವಾಹ ಸಮಾರಂಭ ಮದುವೆ ಮಂಟಪದ ಸಂಭ್ರಮ ನೆನಪಿಸುವಂತಿತ್ತು.

ವಿವಿಧ ಪುಷ್ಪಗಳಿಂದ ಅಲಂಕೃತ ವಾದ ಉತ್ಸ ಮೂರ್ತಿಗೆ ಪೂಜೆ ಅಭಿಷೇಕಗಳು ನಡೆದವು, ಶ್ರೀ ದೇವಿ ಹಾಗೂ ಭೂದೇವಿ ಹಾಗೂ ರಂಗನಾಥೇಶ್ವರನಿಗೆ ಸರ್ವಾಭರಣ ಅಲಂಕಾರದೊಂದಿಗೆ ಸುಮಾರು 25 ಕ್ಕೂ ಹೆಚ್ಚು ಕಂಕಣಧಾರಣೆ ಮಾಡಲಾಯಿತು. ಕಲ್ಯಾಣೋತ್ಸವ ಆಚರಣೆಗೆ ವಿವಿಧ ಕಡೆಗಳಿಂದ ವಿವಾಹ ಆಗದ ಯುವಕ ಯುವತಿಯರು ಆಗಮಿಸಿ ಶ್ರೀ ರಂಗನಾಥೇಶ್ವರನಿಗೆ ವಿವಾಹ ಸಂಕಲ್ಪ ಪೂಜೆ ಸಲ್ಲಿಸಿದರು. ಕಲ್ಯಾಣೋತ್ಸವ ಬಳಿಕ ರುಚಿ ರುಚಿಯಾದ ಭಕ್ಷ್ಯ ಬೋಜನಗಳನ್ನು ಭಕ್ತರಿಗೆ ಉಣಬಡಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
