ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಬಿಜೆಪಿ ಸದಸ್ಯರಿಗೆ ವಿಪ್ ಜಾರಿ. ವಿಪ್ ಉಲ್ಲಂಘಿಸಿದರೇ ಸದಸ್ಯತ್ವ ರದ್ದತಿಗೆ ಕ್ರಮ.

Spread the love

 

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಬಿಜೆಪಿ ಸದಸ್ಯರಿಗೆ ವಿಪ್ ಜಾರಿ. ವಿಪ್ ಉಲ್ಲಂಘಿಸಿದರೇ ಸದಸ್ಯತ್ವ ರದ್ದತಿಗೆ ಕ್ರಮ : ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ಎಚ್ಚರಿಕೆ. 

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30 ರಂದು ಚುನಾವಣೆ ಜರುಗಲಿದ್ದು, ಬಿಜೆಪಿ ಪಕ್ಷದ ಸದಸ್ಯ ಬಣಕಾರ್ ಸುರೇಶ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಚಿಹ್ನೆಯಿಂದ ಗೆದ್ದ ಎಲ್ಲಾ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿದೆ. ವಿಪ್ ಉಲ್ಲಂಘಿಸಿದರೇ ಸದಸ್ಯತ್ವ ರದ್ದತಿಗೆ ಕ್ರಮ ವಹಿಸಲಾಗುತ್ತದೆ ಎಂದು ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ಹೇಳಿದರು.

ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಸೋಮವಾರ ಮಾತನಾಡಿದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ವರಿಷ್ಠರ ಮಾರ್ಗದರ್ಶನದಲ್ಲಿ ಅಭ್ಯರ್ಥಿಯನ್ನಾಗಿ ಬಣಕಾರ ಸುರೇಶ್ ಅವರನ್ನು  ಸೂಚಿಸಲಾಗಿದೆ.

ಈ ಹಿಂದಿನ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ವಿಪ್ ಜಾರಿ ಮಾಡಲು ಮುಂದಾಗಲಿಲ್ಲ. ಪಕ್ಷದ ಕಾರ್ಯಕರ್ತರಿಗೆ ವಿಪ್ ಜಾರಿ ಮಾಡಿಲ್ಲ ಎಂಬ ಅಸಮಾಧಾನ ಇತ್ತು. ಆಗ ನಮ್ಮದು ನಿರ್ಲಕ್ಷ್ಯತನ ಇರಬಹುದು. ಅದರೆ ಅದನ್ನು ಬೇರೆ ನಾಯಕರು ದಿಕ್ಕು ತಪ್ಪಿಸಿದರು ಎಂಬ ಅಪಪ್ರಚಾರ ನಡೆದಿತ್ತು.

ಬಿಜೆಪಿ ಪಕ್ಷದ ಚಿಹ್ನೆಯಿಂದ ಗೆದ್ದ ಮೂವರು ಸದಸ್ಯರು ಮಲ್ಲೇಶ್ವರಿ ಭರತ್, ಭೋವಿ ವೀರೇಶ್, ಎಚ್.ಎಂ.ಚೆನ್ನಮ್ಮ ವಿಜಯಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಹಾಗಾಗಿ ಈ ಬಾರಿ ಎಲ್ಲಾ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ವಿಪ್ ಉಲ್ಲಂಘಿಸಿದರೇ ಪಕ್ಷದಿಂದ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಸದಸ್ಯತ್ವ ರದ್ದತಿಗೆ ಕಡ್ಡಾಯವಾಗಿ ಕ್ರಮ ವಹಿಸಲಾಗುತ್ತದೆ ಎಂದರು.

ಆಕಾಂಕ್ಷಿ ಬಣಕಾರ್ ಸುರೇಶ್ ಗೆಲುವಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸದಸ್ಯರ ಸಹಮತ ಸೂಚಿಸಿದೆ. ಶಾಸಕ ಕೆ.ನೇಮಿರಾಜನಾಯ್ಕ, ಜಿಲ್ಲಾ ಸಹಪ್ರಭಾರಿ ಚೆನ್ನಬಸವನಗೌಡ್ರು, ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣ್ಸಿ ಸೇರಿದಂತೆ ವಿವಿಧ ನಾಯಕರ ಸಹಕಾರ ಸಹ ಇದೆ. ಅಷ್ಟಲ್ಲದೇ ಬಿಜೆಪಿ ಎಲ್ಲಾ ಸದಸ್ಯರು ಬೆಂಬಲಿಸಲಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದ ಒಬ್ವಿಬ್ಬ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭ್ಯರ್ಥಿ ಪರ ಮತ ಗಳಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯರಾದ ಕೆ.ಎಂ.ನವೀನ್ ಕುಮಾರ್, ಜೋಗಿ ಹನುಮಂತ, ಬಣಕಾರ ಸುರೇಶ್, ನಾಗರಾಜ್ ಜನ್ನು, ದೀಪಕ್ ಕಠಾರೆ, ಮುಖಂಡ ಸಂದೀಪ್ ಶಿವಮೊಗ್ಗ, ಅಂಬಳಿ ರವೀಂದ್ರಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಕೋಗಳಿ ಹನುಮಂತ, ದಿವಾಕರ್ ಗೌಡ, ನಗರ ಘಟಕ ಅಧ್ಯಕ್ಷ ಮಂಜುನಾಥ ಹಿರೇಮಠ್, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ ಇದ್ದರು.

Leave a Reply

Your email address will not be published. Required fields are marked *