ತುಂಗಭದ್ರಾ ಅಣೆಕಟ್ಟಿನ 33 ಗೇಟ್‌ಗಳ ಯಶಸ್ವಿ ದುರಸ್ತಿ; ಮೇ.15 ಕ್ಕೆ ಲೋಕಾರ್ಪಣೆ ಗುರಿ – ಡಿಸಿಎಂ ಡಿ.ಕೆ.ಶಿವಕುಮಾರ್.

Spread the love

 

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ(ಹೊಸಪೇಟೆ).

ಟಿಬಿಡ್ಯಾಂನ 19ನೇ ಕ್ರೆಸ್ಟ್ ಗೇಟ್ 2024 ಆಗಸ್ಟ್ 10 ರಂದು ರಾತ್ರಿ ಅನಾಹುತದ ಬಳಿಕ ತಾಂತ್ರಿಕ ತಂಡ ಕೈಗೊಳ್ಳಲಾದ ತುರ್ತು ದುರಸ್ತಿ ಕಾರ್ಯಗಳು ಈಗ ಅಂತಿಮ ಹಂತಕ್ಕೆ ತಲುಪಿವೆ. ಇಂದು ಅಣೆಕಟ್ಟಿನ ಗೇಟ್ ಅಳವಡಿಕೆ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಮೇ 15ರೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕಾರ್ಯ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಹಿತಿ ನೀಡಿದರು.
ಅಣೆಕಟ್ಟಿನ ಒಟ್ಟು 33 ಗೇಟ್‌ಗಳ ಪೈಕಿ 22 ಗೇಟ್‌ಗಳಿಗೆ ಸ್ಲೈಸ್ ಪ್ಲೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ತಜ್ಞರ ವರದಿಯಂತೆ ಹಳೆಯ ಚೈನ್‌ಗಳು ಸದೃಢವಾಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಚೈನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಮೊದಲ ಸೆಟ್ ಹೊಸ ಚೈನ್‌ಗಳು ಮೇ.7 ರಂದು ಆಗಮಿಸಲಿದ್ದು, ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಮೇ.15 ರಂದು ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಾಖಲೆ ಸಮಯದಲ್ಲಿ 33 ಗೇಟ್‌ಗಳನ್ನು ದುರಸ್ತಿಗೊಳಿಸಿದ್ದು ಇಡೀ ದೇಶಕ್ಕೆ ಒಂದು ದೊಡ್ಡ ಸವಾಲು ಮತ್ತು ಮಾದರಿಯಾಗಿದೆ. ಕೇವಲ ಗೇಟ್‌ಗಳ ದುರಸ್ಥಿಗೆ ಸುಮಾರು 54 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದಲ್ಲದೆ, ಕಾಲುವೆಗಳ ದುರಸ್ತಿ ಮತ್ತು ಇತರೆ ಕೆಳಹಂತದ ಕಾಮಗಾರಿಗಳಿಗೆ ಒಟ್ಟು 315 ಕೋಟಿ ರೂಪಾಯಿ ವ್ಯಯಿಸಲಾಗಿದೆ. ತಜ್ಞರ ವರದಿಯಂತೆ ಈ ದುರಸ್ತಿ ಕಾರ್ಯದಿಂದಾಗಿ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳವರೆಗೆ ವೃದ್ಧಿಸಲಿದೆ ಎಂದು ತಿಳಿಸಿದರು.

ನವಲಿ ಸಮಾನಾಂತರ ಜಲಾಶಯ ಹಾಗೂ ಹೂಳು ತೆಗೆಯುವಿಕೆ : ನವಲಿ ಜಲಾಶಯದ ಯೋಜನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಹೂಳು ತುಂಬಿರುವ ಕಾರಣ ಅಣೆಕಟ್ಟಿನ ಸಾಮರ್ಥ್ಯ 105 ಟಿಎಂಸಿ ಯಿಂದ 100 ಟಿಎಂಸಿಗೆ ಇಳಿಕೆಯಾಗಿದೆ. ಆದ್ದರಿಂದ ಹೂಳು ತೆಗೆಯಲು ಚೀನಾ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಗ್ಲೋಬಲ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೂಳು ತೆಗೆಯುವಾಗ ರೈತರ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಜಾಗರೂಕತೆ ವಹಿಸಲಾಗುವುದು. ತುಂಗಭದ್ರಾ ಅಣೆಕಟ್ಟಿನ ಸುತ್ತಮುತ್ತಲ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿದರು. ಅಭಿವೃದ್ಧಿ ಮುಖ್ಯವಾದರೂ ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು 64:34 ಅನುಪಾತದಲ್ಲಿ ಬಂಡವಾಳ ಹೂಡುತ್ತಿದ್ದು, ಡ್ಯಾಂ ಮಂಡಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಈ ಇಡೀ ಕಾರ್ಯಾಚರಣೆಯು ದೇಶಕ್ಕೆ ಒಂದು ದೊಡ್ಡ ಸವಾಲು ಮತ್ತು ತಾಂತ್ರಿಕ ಮಾದರಿಯಾಗಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದ ಅವರು, ರಾಜಕೀಯ ಟೀಕೆಗಳಿಗೆ ಕಿವಿಗೊಡದೆ ರೈತರ ಹಿತರಕ್ಷಣೆ ಮತ್ತು ಜಲಾಶಯದ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಜಲಾಶಯದ 19ನೇ ಗೇಟ್ ಅನಾಹುತಕ್ಕೀಡಾದಾಗ ಸರ್ಕಾರವು ತಕ್ಷಣವೇ ಸ್ಪಂದಿಸಿತ್ತು. ಅಂದು ರಾತ್ರಿಯೇ ಅಧಿಕಾರಿಗಳು ಹಾಗೂ ಸಚಿವರು ಸ್ಥಳಕ್ಕೆ ಧಾವಿಸಿ ತುರ್ತು ಕ್ರಮಗಳನ್ನು ಕೈಗೊಂಡಿದ್ದರು. ಪ್ರಸ್ತುತ ಜಲಾಶಯದ ಎಲ್ಲಾ 33 ಗೇಟ್‌ಗಳ ಅಳವಡಿಕೆ ಕಾರ್ಯ ಮುಗಿದಿದ್ದು, ತಾಂತ್ರಿಕ ತಂಡದ ಸಲಹೆಯಂತೆ ಆಧುನೀಕರಣ ಪ್ರಕ್ರಿಯೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಜಲಾಶಯ ಕ್ರಸ್ಟ್ ಗೇಟ್ ಕಳಚಿದ್ದರಿಂದಾಗಿ ಮೂರು ಜಿಲ್ಲೆಯ ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿ ಗೇಟ್ ಅಳವಡಿಕೆ ಕಾರ್ಯಕ್ಕೆ ಸಹಕರಿಸಿದ್ದಾರೆ. ಆದ್ದರಿಂದ ಕಾಮಗಾರಿ ಪೂರ್ಣಗೊಂಡ ನಂತರ ರಾಯಚೂರು, ಬಳ್ಳಾರಿ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರನ್ನು ಆಹ್ವಾನಿಸಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮತ್ತು ಅಣೆಕಟ್ಟಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ. ಖಂಡ್ರೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬಳ್ಳಾರಿ ಸಂಸದರಾದ ಇ. ತುಕಾರಾಂ, ಶಾಸಕರುಗಳಾದ ಡಾ.ಎನ್.ಟಿ.ಶ್ರೀನಿವಾಸ, ಎಚ್.ಆರ್. ಗವಿಯಪ್ಪ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ವಿಜಯನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಿರಾಜ್ ಶೇಖ್, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಎಸ್ಪಿ ಎಸ್.ಜಾಹ್ನವಿ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಕೊಪ್ಪಳ ಎಸ್ಪಿ ಡಾ. ರಾಮ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಆರ್.‌ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್.ಅಧಿಕಾರಿಗಳಾದ ಟಿಬಿ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ ರೆಡ್ಡಿ, ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಸ್.ಇ ನಾರಾಯಣ ನಾಯ್ಕ,ಇಇ ನಾಗನಾಥ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಎಇಇ ಜಾನಕಾರ, ಶಾಖಾ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *