ಮೇ.9 ಕ್ಕೆ ಬಿಎಸ್ವೈ ಅಭಿಮಾನೋತ್ಸವ : ವಿಜಯನಗರ ಜಿಲ್ಲೆಯಿಂದ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗಿ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸಂಜೀವರೆಡ್ಡಿ ಸುದ್ದಿಗೋಷ್ಟಿಯಲ್ಲಿ ಹೇಳಿಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಮಾಜಿ ಮುಖ್ಯಮಂತ್ರಿ, ರೈತನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲು ಮೇ.9 ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯಿಂದ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸುವ ಮೂಲಕ ಗೌರವ ನಮನ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸಂಜೀವ ರೆಡ್ಡಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿ, ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ರಾಜ್ಯದಲ್ಲಿ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ ರೈತರ ಕೃಷಿ ಸಾಲ ಯೋಜನೆ ಜಾರಿಗೊಳಿಸುವ ಮೂಲಕ ರೈತ ನಾಯಕರಾದ ಬಿಎಸ್ವೈ ತಮ್ಮ ರಾಜಕೀಯ ಜೀವನದಲ್ಲಿ ಪಕ್ಷ ಸಂಘಟನೆ ಸೇರಿದಂತೆ ಜನಸೇವೆಗೆ ಅವಿರತ ಶ್ರಮವಹಿಸಿದ್ದಾರೆ. ಅವರ ರಾಜಕೀಯ ಪಯಣದ ಸುವರ್ಣ ಮಹಾ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಬಿಎಸ್ವೈ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬೂತ್ ಮಟ್ಟದಿಂದ ರಾಜ್ಯಾದ್ಯಂತ ಯಡಿಯೂರಪ್ಪನವರ ಅಭಿಮಾನಿಗಳು ಅಸಂಖ್ಯಾತರಿದ್ದಾರೆ. ಮೇ.9 ರಂದು ಚಿತ್ರದುರ್ಗದಲ್ಲಿ ಅಂದಾಜು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅದರಲ್ಲಿ ವಿಜಯನಗರ ಜಿಲ್ಲೆಯಿಂದ ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿಮಾನಿಗಳನ್ನು ಕರೆದೊಯ್ಯಲು ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಷ್ಟಲ್ಲದೇ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಸ್ವಂತ ವಾಹನಗಳಲ್ಲಿ ಹೆಚ್ಚೆಚ್ಚು ಜನರನ್ನು ಕರೆದುಕೊಂಡು ಹೋಗಲು ಉತ್ಸುಕರಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಈಚೆಗೆ ಮೂರು ಜಿಲ್ಲೆಗಳ ವಿಭಾಗ ಮಟ್ಟದ ಸಭೆ ನಡೆಸುವ ಮೂಲಕ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಉತ್ಸವಕ್ಕೆ ಭಾಗವಹಿಸಲು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದಾರೆ. ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಉದ್ಘಾಟಿಸಲಿದ್ದಾರೆ. ರಾಜ್ಯದ ಸುಮಾರು 10 ಲಕ್ಷ ಅಭಿಮಾನಿಗಳ ಸಮಾಗಮವಾಗಲಿದೆ. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದಲೇ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವಂತೆ ಪ್ರಚಾರ ಕಾರ್ಯ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಮಂಡಲ ಅಧ್ಯಕ್ಷರಾದ ಬೆಣಕಲ್ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಕನಕಪ್ಪ, ನಗರ ಘಟಕ ಅಧ್ಯಕ್ಷ ಮಂಜುನಾಥ ಹಿರೇಮಠ್, ಮಂಡಲ ಕಾರ್ಯದರ್ಶಿ ದಿವಾಕರ್ ಗೌಡ, ಪುರಸಭೆ ಸದಸ್ಯರಾದ ಕೆ.ಎಂ.ನವೀನ್ ಕುಮಾರ, ಸುರೇಶ್ ಬಣಕಾರ್, ನಾಗರಾಜ ಜನ್ನು, ಮುಖಂಡರಾದ ಸಂದೀಪ್ ಶಿವಮೊಗ್ಗ, ಅಂಬಳಿ ರವೀಂದ್ರಗೌಡ, ಎಲ್.ಎಂ.ಶಿವಯೋಗಿ, ಎಚ್.ಎಂ.ಮಲ್ಲಯ್ಯ, ಜಿ.ಕಾಳೇಶ್, ಬುಡೇನ್ ಸಾಬ್, ಸುರೇಶ್, ಸುರೇಂದ್ರ, ಮಂಜುನಾಥ ಮಾಲವಿ ಇದ್ದರು.
