Last Updated on February 27, 2026 by ASHOK UPPAR
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕೂಲಹಳ್ಳಿ ಗೋಣಿಬಸವೇಶ್ವರ ಸ್ವಾಮಿ ರಥೋತ್ಸವ ಅದ್ದೂರಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ಹರಪನಹಳ್ಳಿ ತಾಲೂಕಿನ ಐತಿಹಾಸಿಕ ಶ್ರೀ ಕೂಲಹಳ್ಳಿ ಗೋಣಿಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ತರಹೇವರಿ ಪುಷ್ಪಗಳಿಂದ ಸ್ವಾಮಿಯ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಸಂಜೆ ರಥೋತ್ಸವದ ಮುನ್ನ ನಡೆದ ಪಟಾಕ್ಷಿ ಹರಾಜಿನಲ್ಲಿ 4,51,000 ರೂಗಳಿಗೆ ನೀಲಗುಂದ ಅಜ್ಜಯ್ಯರ ನಾಗಪ್ಪ ಅವರು ಭಕ್ತಿಪೂರ್ವಕವಾಗಿ ಪಡೆದರು.
ಈ ವೇಳೆ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ರಥದ ಸುತ್ತ ಐದು ಸಲ ಪ್ರದಕ್ಷಣೆ ಹಾಕಿಸಲಾಯಿತು. ಬಳಿಕ ಭಕ್ತರು ತೇರಿನ ಗಾಲಿಗಳಿಗೆ ಈಡುಗಾಯಿ ಒಡೆಯುತ್ತಿದ್ದಂತೆ ಭಕ್ತಗಣ ರಥಕ್ಕೆ ಬಾಳೆ ಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಯುವಕರು ಸಡಗರ ಸಂಭ್ರಮದಿಂದ ತೇರು ಎಳೆದು ಸಂಭ್ರಮಿಸಿದರು.

ರಥೋತ್ಸವದಲ್ಲಿ ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
