Last Updated on February 27, 2026 by ASHOK UPPAR
ಮಾ.3 ರಂದು ಹೋಳಿ ಹಬ್ಬದಂದೇ ರಕ್ತ ಚಂದ್ರ ಗ್ರಹಣ! ಅಂದು ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಸಿಗಲಿದಿಯೇ? ಈ ಸುದ್ದಿ ಓದಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).
ಇದೇ ಮಾರ್ಚ್ 3 ರಂದು ಹೋಳಿ ಹಬ್ಬದ ದಿನವೇ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ಸುಮಾರು 100 ವರ್ಷದ ಬಳಿಕ ಹೋಳಿ ಹಬ್ಬ ದಿನದಂದು ಗೋಚರಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ರಕ್ತ ಚಂದ್ರಗ್ರಹಣ (Blood Moon) ಎಂಬುದು ಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಸಂಭವಿಸುವ ಒಂದು ಅಪರೂಪದ ವಿದ್ಯಮಾನವಾಗಿದೆ. ಈ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದು, ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ವಾತಾವರಣದ ಮೂಲಕ ಹಾದು ಬರುವ ಸೂರ್ಯನ ಬೆಳಕಿನಲ್ಲಿ ಕೆಂಪು ಬಣ್ಣವು ಮಾತ್ರ ಚಂದ್ರನ ಮೇಲೆ ಪ್ರತಿಫಲಿತವಾಗಿ ಬೀಳುವುದರಿಂದ, ಚಂದ್ರನು ತಾಮ್ರದ ಕೆಂಪು ಅಥವಾ ರಕ್ತದ ಬಣ್ಣದಲ್ಲಿ ಕಾಣಿಸುತ್ತಾನೆ.
ಮಾ.3 ರಂದು ಪರಿಪೂರ್ಣ ಚಂದ್ರಗ್ರಹಣ ಮಧ್ಯಾಹ್ನ 3:16 ರಿಂದ ಸಂಜೆ 6:47 ವರೆಗೆ ಸಂಭವಿಸಲಿದ್ದು. ಇದನ್ನು ಕೇತುಗ್ರಸ್ಥ ಚಂದ್ರಗ್ರಹಣ ಸಹ ಎನ್ನಲಾಗಿದೆ. ಇಂತಹ ಗ್ರಹಣದ ವೇಳೆಯಲ್ಲಿ ನೈಸರ್ಗಿಕವಾಗಿ ಅನೇಕ ಬದಲಾವಣೆಗಳು ನಡೆಯಲಿವೆ. ಕೆಲವು ವೇಳೆ ಪ್ರಾಕೃತಿಕ ವಿಕೋಪಗಳು ನಡೆಯಲಿವೆ ಎನ್ನಲಾಗಿದೆ. ಗ್ರಹಣದ ಕಾಲದಲ್ಲಿ ನಕಾರಾತ್ಮಕ ಶಕ್ತಿ ಪರಿಣಾಮ ಬೀರಲಿದೆ ಎಂಬ ನಂಬಿಕೆ ಇದೆ.
ಹಾಗಾಗಿ ಬಹುತೇಕ ಪ್ರಸಿದ್ಧ ಮಂದಿರಗಳಿಗೆ ಬೀಗ ಹಾಕುವ ಮೂಲಕ ದೇವಸ್ಥಾನಗಳಿಗೆ ಬಂದ್ ಮಾಡಲಿದ್ದಾರೆ.
ಆಂದ್ರಪ್ರದೇಶದ ತಿರುಮಲದ ಶ್ರೀವೆಂಕಟೇಶ್ವರ ದೇವಸ್ಥಾನ ಮಾ.3 ರಂದು ಬೆ.09 ರಿಂದ ಸಂಜೆ 7:30 ವರೆಗೆ ಬಂದ್ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಧರ್ಮಸ್ಥಳ ಮಂಜುನಾಥ ದೇವಸ್ಥಾನ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಾ.3 ರಂದು ಮಧ್ಯಾಹ್ನ 1:30 ರಿಂದ ಸಂಜೆ 7:30 ರವರೆಗೆ ಬಂದ್ ಮಾಡಲಾಗುತ್ತದೆ ಎಂದು ಭಕ್ತರಿಗೆ ಸೂಚಿಸಲಾಗಿದೆ.
ವಿಶ್ವ ವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷ ದೇವಾಲಯ ಮಾ.3 ರಂದು ಮಧ್ಯಾಹ್ನ 1:15 ರಿಂದ ದೇವರ ದರ್ಶನ ಇರುವುದಿಲ್ಲ. ಮಾ.4 ರಂದು ಬೆಳಿಗ್ಗೆಯಿಂದಲೇ ಯಥಾ ಪ್ರಕಾರ ಪೂಜಾದಿಗಳು ಜರುಗಲಿವೆ ಎಂದು ಅಡಳಿತ ಕಚೇರಿ ಮಾಹಿತಿ ನೀಡಿದೆ.
ಅದರೆ ವಿಶೇಷ ಎಂದರೆ ಗೋಕರ್ಣ ಮತ್ತು ಮುರುಡೇಶ್ವರದ ಶಿವ ದೇವಾಲಯಗಳು ಗ್ರಹಣ ಕಾಲದಲ್ಲಿ ಭಕ್ತರಿಗೆ ದರ್ಶನ ನೀಡಲಿವೆ ಎಂಬುದು ಗಮನಾರ್ಹವಾಗಿದೆ.
