Last Updated on February 24, 2026 by ASHOK UPPAR
ನುಗ್ಗೆ ಬೆಳೆ ಬ್ರಹ್ಮ ವೃಕ್ಷ, ರೈತರಿಗೆ ವರದಾನ ಅರ್ಥಿಕ ಸಬಲತೆಗೆ ಸಾವಯವ ನುಗ್ಗೆ ಬೆಳೆ ಸಹಕಾರಿ : ನುಗ್ಗೆ ಕೃಷಿಕ ಬಸಯ್ಯ ಹಿರೇಮಠ್ ಅಭಿಮತ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ನುಗ್ಗೆ ಕೃಷಿಯಲ್ಲಿ ನೈಸರ್ಗಿಕ ಮತ್ತು ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು. ನುಗ್ಗೆ ಎಲೆ ಸಂಗ್ರಹ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟ ಹೀಗೆ ಪ್ರತಿ ಹಂತದಲ್ಲಿ ಶುದ್ಧತೆ ಅಥವಾ ಗುಣಮಟ್ಟ ಕಾಪಾಡಿಕೊಳ್ಳಬೇಕು. ಇದೇ ನುಗ್ಗೆ ಕೃಷಿ ಯಶಸ್ಸಿನ ಮೂಲ ಎಂದು ಪ್ರಗತಿಪರ ನುಗ್ಗೆ ಕೃಷಿಕ ಬ್ಯಾಲಿಹಾಳ್ ಬಸಯ್ಯ ಹಿರೇಮಠ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ನಂದಿಪುರ ಶ್ರೀಗುರು ದೊಡ್ಡ ಬಸವೇಶ್ವರ ಮಠದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ‘ನುಗ್ಗೆ ಕೃಷಿ ಮತ್ತು ನುಗ್ಗೆ ಬೆಳೆಗಾರರ ಸಬಲೀಕರಣ’ ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನುಗ್ಗೆ ಬೆಳೆ ರೈತರಿಗೆ ವರದಾನ. ಇದು ಬ್ರಹ್ಮ ವೃಕ್ಷವಾಗಿದ್ದು ಎಲ್ಲಾ ವಿಧದ ಮಣ್ಣಿನಲ್ಲಿ ಸುಲಭವಾಗಿ ಬೆಳೆಯಬಹುದು. ನುಗ್ಗೆ ಸೊಪ್ಪನ್ನು ಒಣಗಿಸಿ ಅದಕ್ಕೆ ಇತರೆ ಉತ್ಪನ್ನಗಳನ್ನು ಹದವಾಗಿ ಸೇರಿಸಿ ಅನೇಕ ಪ್ರಾಡೆಕ್ಟ್ ಗಳನ್ನು ಮಾಡಬಹುದು. ನುಗ್ಗೆ ಬೀಜದಿಂದ ಎಣ್ಣೆ ತಯಾರಿಸಬಹುದು. ಇಂದು ನುಗ್ಗೆ ಆಹಾರವಾಗಿ ಅಷ್ಟೇ ಅಲ್ಲ ಔಷಧಿಯಾಗಿಯೂ ಗರಿಷ್ಟ ಮಟ್ಟದಲ್ಲಿ ಬಳಕೆ ಆಗುತ್ತಿದೆ. ಸಾವಯವ ಬೆಳೆಗಾರರ ಪ್ರಮಾಣ ಪತ್ರ ಇದ್ದರೆ ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. 300 ರಿಂದ 500 ಮೆಟ್ರಿಕ್ ಟನ್ ನುಗ್ಗೆ ಸೊಪ್ಪಿಗೆ ಬೇಡಿಕೆ ಇದೆ. ಆದರೆ ಅಷ್ಟೊಂದು ಪೂರೈಕೆ ಮಾಡಲು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ನಮ್ಮ ರೈತರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಗುಣಮಟ್ಟದಲ್ಲಿ ನುಗ್ಗೆ ಕೃಷಿ ಮತ್ತು ಸಂಸ್ಕರಣೆ ಮಾಡಿ ಆರ್ಥಿಕ ಸಬಲತೆ ಸಾಧಿಸಬಹುದು ಎಂದರು.
ಕೃಷಿ ವಿಜ್ಞಾನಿ ಮಹಾಂತೇಶ್ ಪಾಟೀಲ್ ಮಾತನಾಡಿ, ರೈತರು ಕೃಷಿಗೆ ಸಂಪೂರ್ಣವಾಗಿ ಅರ್ಪಿಸಿ ಕೊಳ್ಳಬೇಕು. ಯೋಜನಾಬದ್ಧ ಕೃಷಿ ಮಾಡಬೇಕು. ಪ್ರಯೋಗಗಳು ಮತ್ತು ಸಂಶೋಧನೆಗಳಿಗೆ ತೆರೆದುಕೊಳ್ಳಬೇಕು. ಬೆಳೆ ಮಾತ್ರ ಸಾವಯವದಲ್ಲಿ ಇದ್ದರೆ ಸಾಲದು, ಸಾವಯವ ರೈತನ, ಇಡೀ ಜಮೀನಿನ ಉಸಿರಾಗಬೇಕು ಎಂದರು.
ಪ್ರಗತಿಪರ ಕೃಷಿಕ ವಿಶ್ವೇಶ್ವರ ಸಜ್ಜನ್ ಮಾತನಾಡಿ, ನುಗ್ಗೆ ಬೇರಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಔಷಧಿಗಳ ಅಗರ. ಅದನ್ನೆಲ್ಲ ಮೌಲ್ಯವರ್ಧಿಸುವ ಮತ್ತು ಮಾರಾಟ ಮಾಡುವ ತಂತ್ರಗಳನ್ನು ರೈತರು ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಡಾ. ಮಹೇಶ್ವರ ಸ್ವಾಮೀಜಿಗಳು ಮಾತನಾಡಿ, ಸಾವಯವ ಕೃಷಿಯಲ್ಲಿ ನುಗ್ಗೆ ಬೆಳೆದರೆ ಬಹು ಬೇಡಿಕೆ ಇದೆ. ನುಗ್ಗೆಕಾಯಿಯಿಂದ ಅಷ್ಟೇ ಆದಾಯ ನಿರೀಕ್ಷಿಸಿದರೆ ಹಲವು ವೇಳೆ ನಷ್ಟ ಸಂಭವಿಸುತ್ತದೆ. ಅದರ ಎಲೆಯನ್ನು ಒಣಗಿಸಿ ನೇರವಾಗಿ ಅಥವಾ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಲಾಭದಾಯಕ ಕೃಷಿ ಆಗಲಿದೆ ಎಂದರು.

ಈ ವೇಳೆ ಪ್ರಗತಿಪರ ಕೃಷಿಕರಾದ ಬಿ.ಎಂ ಈರಪ್ಪಯ್ಯ, ಡಾ.ಚಿಕ್ಕಣ್ಣ, ಎಂ ಶಿವಮೂರ್ತಿ, ವಿಷ್ಣು, ನಿಯಾಜಿ, ಶಿವಜ್ಜ ಬಿದರಕೇರಿ, ವಸಂತ ಮಾಲವಿ, ಒಪ್ಪತ್ತೇಶ್ವರ, ನಾಗೇನಹಳ್ಳಿ ಶ್ರೀನಿವಾಸ್, ಅಪ್ಪೇನಹಳ್ಳಿ ಶಿವಣ್ಣ, ಹೆಚ್.ಎಸ್ ಕರ್ಣಂ, ಓಬಳೇಶ್, ಡಾ.ಕೊಟ್ರೇಶ್ ಇತರರು ಇದ್ದರು. ಸ್ವರೂಪ್ ಕೊಟ್ಟೂರು, ಹೆಚ್.ಎಂ ಕೊಟ್ರದೇವರು ಕಾರ್ಯಕ್ರಮ ನಿರ್ವಹಿಸಿದರು.
