ಎಸ್ಸೆಸ್ಸೆಲ್ಸಿ ಹಾಲ್ ಟಿಕೆಟ್ ಸಿಗದ ಹಿನ್ನಲೆ ವಿದ್ಯಾರ್ಥಿನಿ ಆತ್ಮಹತ್ಯೆ ?

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ಸಿಗಲಿಲ್ಲ ಎಂದು ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಕ್ಯಾದಿಗಿಹಳ್ಳಿ ಗ್ರಾಮದಲ್ಲಿ ಮಾ.17 ರ ಮಂಗಳವಾರ ನಡೆದಿದೆ.

ಬಾಚಿಗೊಂಡನಹಳ್ಳಿ ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಿಕಾ (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ.

ಎಸ್ಸೆಸ್ಸೆಲ್ಸಿ ಹಾಲ್ ಟಿಕೆಟ್ ಸಿಗದೇ ಪರೀಕ್ಷೆಗೆ ಹಾಜರಾಗುವುದು ಹೇಗೆ ಎಂಬ ಆತಂಕದಿಂದ ಮನನೊಂದು ಮನೆಯಲ್ಲಿದ್ದ ನ್ಯಾನೋ ಯೂರಿಯಾ ರಸಗೊಬ್ಬರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡ ಬಂದಿದ್ದರಿಂದ ಸದ್ಯಕ್ಕೆ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆಯ ವಿವರ : ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಪೂರ್ವಿಕಾ ಎಂಬ ವಿದ್ಯಾರ್ಥಿನಿ ಹಾಜರಾತಿ ಕೊರತೆಯಿಂದಾಗಿ ಹಾಲ್ ಟಿಕೆಟ್ ವಂಚಿತರಾಗಿದ್ದಾರೆ. ಶಿಕ್ಷಣ ಇಲಾಖೆ ನಿಯಮಾನುಸಾರ ಶೇಕಡಾ 75 ರಷ್ಟು ಹಾಜರಾತಿ ಇರದಿದ್ದರಿಂದ ಹಾಲ್ ಟಿಕೆಟ್ ದೊರೆತಿಲ್ಲ ಎಂಬುದು ಮುಖ್ಯ ಶಿಕ್ಷಕ ವಿ.ಪ್ರಕಾಶ್ ಅವರ ಸ್ಪಷ್ಟನೆ.

ಮುಖ್ಯ ಶಿಕ್ಷಕರ ವಿರುದ್ಧ ಪೋಷಕರ ಆರೋಪ : ವಿದ್ಯಾರ್ಥಿನಿ ಪೂರ್ವಿಕಾ ಅವರ ಪೋಷಕರು ಕಳೆದ ಒಂದು ತಿಂಗಳ ಹಿಂದೆಯೇ ಶಾಲಾ ಮುಖ್ಯ ಶಿಕ್ಷಕರ ಬಳಿ ಬಂದು ಪ್ರವೇಶಪತ್ರಕ್ಕೆ ಬೇಕಿರುವ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದೇವೆ. ಆದರೂ ಮುಖ್ಯ ಶಿಕ್ಷಕರ ನಿರ್ಲಕ್ಷ್ಯತೆಯಿಂದಾಗಿ ನಮ್ಮ ಮಗಳಿಗೆ ಹಾಲ್ ಟಿಕೆಟ್ ದೊರೆತಿಲ್ಲ. ಈ ಬಗ್ಗೆ ಹಲವಾರು ಬಾರಿ ವಿಚಾರಿಸಿದರೇ ಹಾಲ್ ಟಿಕೆಟ್ ಸಿಗಲಿದೆ ಎಂಬ ಭರವಸೆ ನೀಡಿದ್ದರು. ಇದೀಗ ನನ್ನ ಪ್ರಯತ್ನ ನಾನು ಮಾಡಿದ್ದೇನೆ ಇಲಾಖೆಯಿಂದ ನೀಡಿಲ್ಲ ಎನ್ನುತ್ತಿದ್ದಾರೆ. ಆದರೆ ಪೂರ್ವಿಕಾಗಿಂತ ಕಡಿಮೆ ಹಾಜರಾತಿ ಇದ್ದ ಕೆಲವು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿದೆ. ಇದರಲ್ಲಿ ಮುಖ್ಯ ಶಿಕ್ಷಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಮುಖ್ಯ ಶಿಕ್ಷಕ ವಿ.ಪ್ರಕಾಶ್ ಅವರು ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯ ನಿಯಮದಂತೆ ಹಾಜರಾತಿ ಕಡಿಮೆ ಇದ್ದ ಕಾರಣ ಪ್ರವೇಶ ಪತ್ರ ಬಂದಿಲ್ಲ ಪೋಷಕರು ಪ್ರವೇಶ ಪತ್ರ ಕೊಡಿಸಲು ಮನವಿ ಮಾಡಿದ್ದರು. ಆದರೆ ಬೆಂಗಳೂರಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ನಾನು ವಿಚಾರಿಸಿದರೆ ಸಮಿತಿಯಲ್ಲಿ ತೀರ್ಮಾನಿಸಿ ನಿಮಗೆ ಕರೆ ಮಾಡುತ್ತೇವೆ ಎಂದು ತಿಳಿಸಿದ್ದರು. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉತ್ತರಿಸಿದ್ದಾರೆ.

ಬಿಇಒ ಎಂ.ಎಸ್.ಪ್ರಭಾಕರ್ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸದ್ಯಕ್ಕೆ ವಿದ್ಯಾರ್ಥಿನಿ ಸೇಫ್ ಆಗಿದ್ದಾರೆ. ಯಾವುದೇ ಪ್ರಾಣಾಪಾಯ ಇಲ್ಲ. ಶಿಕ್ಷಣ ಇಲಾಖೆ ನಿಯಮಾನುಸಾರ ಹಾಜರಾತಿ ಕೊರತೆಯಿಂದ ಪರೀಕ್ಷೆ ಹಾಲ್ ಟಿಕೆಟ್ ದೊರೆತಿಲ್ಲ. ತಾಲೂಕಿನಲ್ಲಿ ಹಲವು ವಿದ್ಯಾರ್ಥಿಗಳಿಗೆ ಶೇ. 2 ರಷ್ಟು ಇರಬಹುದು. ಇದೇ ಕಾರಣದಿಂದ ಪ್ರವೇಶ ಪತ್ರ ದೊರೆತಿಲ್ಲ ಎಂದಿದ್ದಾರೆ.

ಈ ಘಟನೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.


Comments

Leave a Reply

Your email address will not be published. Required fields are marked *