ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ಹಂಚಿನಾಳು ಮತ್ತು ಚಿಮ್ಮನಹಳ್ಳಿ ಗ್ರಾಮಗಳ ಮಧ್ಯೆ ವಿಷಪೂರಿತ ಆಹಾರ ತಿಂದು 14 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾ.31 ರಂದು ಮಧ್ಯಾಹ್ನ ನಡೆದಿದೆ.
ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಉಪ್ಪಾರಗಟ್ಟಿ ಮೂಗಪ್ಪ ಅವರು ನಿತ್ಯದಂತೆ ತಮ್ಮ ಸುಮಾರು 40 ರಿಂದ 50 ಕುರಿಗಳನ್ನು ಬೆಳಿಗ್ಗೆ ಮೇಯಿಸಲು ಗ್ರಾಮದ ಹೊರವಲಯದಲ್ಲಿನ ಹೊಲಗಳಿಗೆ ಹೋಗಿದ್ದಾರೆ, ಕುರಿಗಳು ಮೇಯುತ್ತಿರುವಾಗ ಸುಮಾರು 30 ರಿಂದ 35 ಕುರಿಗಳು ವಿಷ ಪಧಾರ್ಥ ಸೇವಿಸಿ ಅಸ್ವಸ್ಥವಾಗಿವೆ.
ಕೂಡಲೇ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿದೆ. ಸ್ಥಳದಲ್ಲಿಯೇ ಅಸ್ವಸ್ಥಗೊಂಡ ಕೆಲ ಕುರಿಗಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. 30 ರಿಂದ 35 ಕುರಿಗಳಲ್ಲಿ 14 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಈ ಬಗ್ಗೆ ವೈದ್ಯ ಡಾ.ಸೂರಪ್ಪ ಪ್ರತಿಕ್ರಿಯಿಸಿ ಸಾವನ್ನಪ್ಪಿದ 14 ಕುರಿಗಳ ಮರಣೋತ್ತರ ಪರೀಕ್ಷೆ ಹಾಗೂ ಸ್ಯಾಂಪಲ್ ಸಹಿತ ಬೆಂಗಳೂರಿನ ಲ್ಯಾಬೋರೇಟರಿಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕುರಿಗಾಹಿಗೆ ಸರ್ಕಾರದಿಂದ ನೀಡುವ ನಷ್ಟ ಪರಿಹಾರವನ್ನು ಕುರಿಗಳ ಮಾಲೀಕರಿಗೆ ನೀಡಲಾಗುತ್ತದೆ ಎಂದರು.
