ಯಾವುದು ಕೂಡಿದರೆ ಸುಕೃತ?
ದೊರೆವ ಜೀತಕೆ ದುಡಿತ, ಮರುದಿನದ ಚಿಂತೆಮಿತ
ಹೊರೆಯ ಹಗುರಾಗಿಸುವ ಗೆಳೆಯರೊಡನಾಟ |
ಸರಳತೆಯ ಪರಿತುಷ್ಟಿ, ಪರಮಾರ್ಥದೃಷ್ಟಿಯಿವು
ಸರಿಗೂಡೆ ಸುಕೃತವದು – ಮಂಕುತಿಮ್ಮ ||
ಮಾಡುವ ಕೆಲಸಕ್ಕೆ ಸರಿಯಾದ ವೇತನ ನಾಳಿನ ಬಗ್ಗೆ ಮಿತವಾದ ಚಿಂತೆ, ಭಾರವನ್ನು ಹಗುರವನ್ನಾಗಿ ಮಾಡುವ ಸ್ನೇಹಿತರ ಒಡನಾಟ, ಸರಳತೆಯ ಸಂತೃಪ್ತಿ, ಪರಮಾರ್ಥದಲ್ಲಿ ದೃಷ್ಟಿ. ಇವು ಸರಿಯಾಗಿ ಕೂಡಿ ಬಂದರೆ ಅದು ಪುಣ್ಯ.
ನಮ್ಮ ಬದುಕು ಸಂತೃಪ್ತ ಬದುಕಾಗಬೇಕಾದರೆ ಒಂದಷ್ಟು ಅಂಶಗಳನ್ನು ಜೀವನದಲ್ಲಿ ಅನುಸರಿಸಬೇಕು. ನಾವು ಮಾಡುವ ಕೆಲಸಕ್ಕೆ ಸರಿಯಾದ ಸಂಬಳ ಸಿಗುವಂತಿರಬೇಕು. ನಾಳೆಯ ಬಗ್ಗೆ ಅತಿಯಾದ ಚಿಂತೆ ಇಲ್ಲದಿರುವಿಕೆ, ಬದುಕಿನಲ್ಲಿಯ ಭಾರವನ್ನು ಕಡಿಮೆ ಮಾಡುವಂತಹ ಗೆಳೆಯರ ಒಡನಾಟ, ಸರಳತೆಯನ್ನು ಅನುಸರಿಸುವುದರಿಂದ ಸಂತೃಪ್ತಿ, ಭಗವಂತನಲ್ಲಿ ದೃಷ್ಟಿ – ಇವೆಲ್ಲ ನಮ್ಮ ಬದುಕಿನಲ್ಲಿ ಸೇರಿಕೊಂಡರೆ ಅದು ಅದೃಷ್ಟದ ಫಲ ಸಿಕ್ಕಹಾಗೆ. ಇವೆಲ್ಲವೂ ಒಬ್ಬ ವ್ಯಕ್ತಿಯಲ್ಲಿ ಕೂಡಿ ಬಂದರೆ ಅಂಥ ವ್ಯಕ್ತಿಯ ಬದುಕು ಸುಂದರವಾಗುತ್ತದೆ. ಅಲ್ಲದೆ ಬದುಕಿನಲ್ಲಿ ಒಂದು ಸಾರ್ಥಕತೆಯ ಭಾವ ಮೂಡುತ್ತದೆ.
