ನಗು ಮತ್ತು ತಾಳ್ಮೆ ನಮಗೆ ಯಾವುದಕ್ಕೆ ಬೇಕು?
ಕೈಕೇಯಿ ಸತ್ಯಭಾಮಯರಂಶವಿರದ ಪೆಣ್
ಲೋಕದೊಳಗಿರಳು; ಬೆಳೆವುದು ಲೋಕವವರಿಂ |
ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ ಬೇಕದಕೆ ನಗು ಸಹನೆ – ಮಂಕುತಿಮ್ಮ ||
ಕೈಕೇಯಿ ಸತ್ಯಭಾಮೆಯರ ಅಂಶವಿರದ ಹೆಣ್ಣು ಲೋಕದಲ್ಲಿ ಇರುವುದಿಲ್ಲ. ಅವರಿಂದಲೇ ಲೋಕವು ಬೆಳೆಯುವುದು. ಸಾಕಿ ಸಲಹುವ ಮತ್ಸರವು ಸೃಷ್ಟಿಯ ಉಪಾಯ. ನಗು ಸಹನೆ ಅದಕ್ಕೆ ಬೇಕು.
ಲೋಕದಲ್ಲಿರುವ ಎಲ್ಲಾ ಹೆಣ್ಣುಗಳಲ್ಲಿಯೂ ಕೈಕೇಯಿ ಸತ್ಯಭಾಮೆಯರ ಅಂಶವಿದ್ದೇ ಇರುತ್ತದೆ. ಕೈಕೇಯಿ, ರಾಜ್ಯ ತನ್ನ ಮಗನಿಗೇ ಸಿಗಬೇಕೆಂದು ಬಯಸಿದಳು. ಅದರಂತೆ ಗಂಡನ ಪ್ರೀತಿ ತನಗೆ ಮಾತ್ರ ಸೀಮಿತವಾಗಿ ಇರಬೇಕೆಂದು ಸತ್ಯಭಾಮೆ ಬಯಸಿದಳು. ಈ ರೀತಿಯ ಮತ್ಸರ ಲೋಕದ ಬೆಳವಣಿಗೆಗೆ ಸಹಾಯಕವಾಗುತ್ತದೆ. ಅದು ಸೃಷ್ಟಿಯೇ ಮಾಡಿದ ಉಪಾಯ. ಆ ಮಟ್ಟಿನ ಮತ್ಸರವನ್ನು ನಾವು ಸಹಿಸಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ನಗು ಸಹನೆಗಳು ತೀರಾ ಅಗತ್ಯ. ಇಂತಹ ಮತ್ಸರಗಳು ಪ್ರಾಣಿ ಪಕ್ಷಿಗಳಲ್ಲಿಯೂ ಕಾಣಿಸಿಗುತ್ತವೆ. ಒಂದು ಹಸು ಕರು ಹಾಕಿದಾಗ ಹುಲಿಯನ್ನೇ ಎದುರಿಸುವ ಸಾಮರ್ಥ್ಯವನ್ನು ಪಡೆದಿರುತ್ತದೆ. ತನ್ನ ಕರುವನ್ನು ಮಾತ್ರ ವಿಶೇಷ ಆಸ್ಥೆಯಿಂದ ನೋಡಿಕೊಳ್ಳುತ್ತದೆ. ಸ್ತ್ರೀಯರೂ ಕೂಡ ತಮ್ಮ ಮಕ್ಕಳ ಮೇಲೆ ವಿಶೇಷ ಪ್ರೀತಿ ಅಭಿಮಾನವನ್ನು ಹೊಂದಿರುತ್ತಾರೆ. ಇಂತಹ ಗುಣಗಳು ಸಂತತಿಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ.
