ಬಸವಕಲ್ಯಾಣದ ಅರಿವಿನ ಗವಿಯಲ್ಲಿ ಹಡಪದ ಅಪ್ಪಣ್ಣ ಮೂರ್ತಿ ಪುನಃ ಪ್ರತಿಷ್ಠಾಪಿಸಿ ; ಶ್ರೀ ಹಡಪದ ಅಪ್ಪಣ ಸಮಾಜ ಸೇವಾ ಸಂಘದಿಂದ ಒತ್ತಾಯ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ , ಹಗರಿಬೊಮ್ಮನಹಳ್ಳಿ.
ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರವಿರುವ ಹಡಪದ ಅಪ್ಪಣ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಉಪತಹಸೀಲ್ದಾರ್ ಶಿವಕುಮಾರ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಂಜುನಾಥ ಬ್ಯಾಲಾಳ್ ಮಾತನಾಡಿ, ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ವಿಶ್ವಗುರು ಬಸವಣ್ಣನವರ ಅರಿವಿನ ಗುಹೆ ಪಕ್ಕದಲ್ಲೇ ಅವರ ಆಪ್ತಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣನವರ ಅರಿವಿನ ಗವಿಯೂ ಅಸ್ತಿತ್ವದಲ್ಲಿದೆ. ಆದರೆ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಹಸ್ತಕ್ಷೇಪ ಮಾಡಿ ಅನ್ಯ ಶರಣರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವುದು ಹಾಗೂ ಬಸವ ಕಲ್ಯಾಣದ ಅಭಿವೃದ್ಧಿ ಪ್ರಾಧಿಕಾರದವರು ಅಪ್ಪಣ್ಣನವರ ಗುಹೆ ಮುಂಭಾಗದಲ್ಲಿ ಹಾಕಲಾಗಿದ್ದ ನಾಮಫಲಕವನ್ನೂ ಸಹ ರಾತ್ರೋರಾತ್ರಿ ಕಿತ್ತು ಹಾಕಿರುವುದು ಖೇದನೀಯ ಸಂಗತಿ. ಇದರಿಂದ ನಮ್ಮ ಸಮುದಾಯದ ಭಕ್ತಿ ಭಾವನೆಗಳಿಗೆ ತೀವ್ರ ನೋವುಂಟಾಗಿದ್ದು ನಮ್ಮ ಶರಣರ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ.
ಮೊದಲಿನಿಂದಲೂ ಹಡಪದ ಸಮುದಾಯವನ್ನು ಕನಿಷ್ಟರೆಂಬಂತೆ ಸಮಾಜ ಕಾಣುತ್ತಾ ಬಂದಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ನಾವು ನಮ್ಮ ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಸಮಾಜದ ಮುಖಂಡರು, ಭಕ್ತರು ಮತ್ತು ಪೂಜ್ಯ ಭಾಲ್ಕಿ ಬಸವಲಿಂಗ ಪಟ್ಟದೇವರು ಸೇರಿದಂತೆ ಅನೇಕ ಮಠಾಧೀಶರು ಹಲವು ಬಾರಿ ಹೋರಾಟ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಬೇಕು ಹಾಗೂ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಯವರನ್ನು ಅಲ್ಲಿನ ಪ್ರಾಧಿಕಾರದ ಸದಸ್ಯರಾಗಿ ಮಾಡಿಕೊಂಡು ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಈ ವೇಳೆ ಹಡಪದ ಅಪ್ಪಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್.ನಿಂಗಪ್ಪ, ಉಪಾಧ್ಯಕ್ಷ ಹೆಚ್.ವೀರೇಶ, ಪ್ರಮುಖರಾದ ವಿರುಪಾಕ್ಷಪ್ಪ, ಕೆ.ಹಾಲೇಶ, ಹೆಚ್.ಕೊಟ್ರೇಶ, ಹೆಚ್.ಶಿವಮೂರ್ತಿ, ಪರಮೇಶ, ಮಲ್ಲಿಕಾರ್ಜುನ, ದೊಡ್ಡಬಸವರಾಜ, ಬಸವರಾಜ, ಉಜ್ಜಿನಪ್ಪ, ಜಗದೀಶ ಇತರರಿದ್ದರು.
