Last Updated on February 23, 2026 by ASHOK UPPAR
ಸರ್ಕಾರಿ ಶಾಲಾ ಕೊಠಡಿಗೆ ಬೆಂಕಿ. ಪಠ್ಯಪುಸ್ತಕಗಳು, ಕಂಪ್ಯೂಟರ್ ಉಪಕರಣಗಳು ಸುಟ್ಟು ಕರಕಲು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಪೊಲೀಸರಿಂದ ಮೀನಾಮೇಷ?
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದಕ್ಕೆ ಬೆಂಕಿ ಬಿದ್ದ ಹಿನ್ನಲೆಯಲ್ಲಿ ಕೊಠಡಿಯಲ್ಲಿದ್ದ ಅಂದಾಜು 1.50 ಲಕ್ಷ ರೂ ಮೌಲ್ಯದ ಉಪಕರಣಗಳು ಬೆಂಕಿಗಾಹುತಿಯಾಗಿರುವ ಘಟನೆ ಫೆ.23 ರಂದು ಬೆಳಿಗ್ಗೆ ನಡೆದಿದೆ.
ಪಿಎಂಶ್ರೀ ಶಾಲೆಯಾಗಿ ಶಿಕ್ಷಣ ಸೇವೆ ನೀಡುತ್ತಿದ್ದ ಹಳೇ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.23 ರಂದು ಬೆಳ್ಳಂ ಬೆಳಿಗ್ಗೆ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಒಳಗಿದ್ದ ಕಂಪ್ಯೂಟರ್ ಮಾನಿಟರ್ ಸೇರಿ ಪ್ರಾಜೆಕ್ಟಾರ್ ಹಾಗೂ ಪಠ್ಯ ಪುಸ್ತಕಗಳು ಬೆಂಕಿಗಾಹುತಿಯಾಗಿ ಭಸ್ಮಗೊಂಡಿವೆ. ಕೊಠಡಿಯೊಳಗಿದ್ದ ಸುಮಾರು 6 ಕಂಪ್ಯೂಟರ್ ಮಾನಿಟರಗಳು, ಪ್ರಾಜೆಕ್ಟರ್ ಸೇರಿದಂತೆ ಪಠ್ಯಪುಸ್ತಕಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿವೆ.
ಬಹುದಿನಗಳಿಂದ ಶಾಲಾ ಆವರಣದಲ್ಲಿ ಪುಂಡರ, ಪೋಕರಿಗಳ ಕಾಟ ಹೆಚ್ಚಾಗಿತ್ತು. ಆದರೆ ಶಾಲಾ ಆವರಣದಲ್ಲಿ ಈಚೇಗೆ ಹೈಮಾಸ್ಟ್ ಲೈಟ್ ಹಾಕುವ ಮೂಲಕ ಶಾಲಾ ಆವರಣಕ್ಕೆ ಅನಗತ್ಯ ವ್ಯಕ್ತಿಗಳು ಬಾರದಂತೆ ನಿರ್ಭಂಧ ಹಾಕಲಾಗಿತ್ತು. ಶಾಲೆಯ ತಡೆಗೋಡೆಗೂ ಸಹ ಗೋಡೆ ಬರಹ ಬರೆಸುವ ಮೂಲಕ ಕಿಡಿಗೇಡಿಗಳಿಂದ ಮುಕ್ತಗೊಳಿಸಲು ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿತ್ತು. ಆದರೆ ಶಾಲೆಗೆ ಕಾಂಪೌಂಡು ಚಿಕ್ಕದಾಗಿದ್ದರಿಂದ ಪುಡಾರಿಗಳು ಒಳಗಡೆ ಬರಲು ಸರಳ ಮಾರ್ಗವಾಗಿತ್ತು. ಶಾಲೆಗೆ ಬೆಂಕಿ ಹಚ್ಚುತ್ತಾರೆಂಬ ನಿರೀಕ್ಷೆ ಮಾಡದ ಶಿಕ್ಷಕರಿಗೆ ಇಂದು ಅಚ್ಚರಿ ಮೂಡಿಸಿತ್ತು.

ಕೊಠಡಿಯ ಹೊರಗಡೆ ಕಡ್ಡಿಪೊಟ್ಟಣದ ಅವಶೇಷಗಳನ್ನು ನೋಡಿದರೇ ವೆಂಟಿಲೇಟರ್ ಒಳಗಿಂದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ ಸರ್ಕಾರಿ ಶಾಲೆಯ ಕೊಠಡಿಯೊಂದಕ್ಕೆ ಬೆಂಕಿ ಬಿದ್ದರೇ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ವಾಹನ ಸೇರಿ ಸಿಬ್ಬಂದಿಗಳು ಬೆಂಕಿ ನಂದಿಸಲು ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಶಾಲೆಯ ಮುಖ್ಯ ಶಿಕ್ಷಕ ವೀರನಗೌಡ ಪೊಲೀಸ್ ಠಾಣೆಗೆ ಅಲೆದರೂ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಿ ಪ್ರಕರಣ ದಾಖಲಿಸದಿರುವುದು ಅಚ್ಚರಿ ಮೂಡಿಸಿದೆ.
ಸರ್ಕಾರಿ ಶಾಲೆ ಎಂದರೇ ಅಷ್ಟೋಂದು ತಾತ್ಸಾರವೇ? ಇದೇ ಖಾಸಗಿ ಶಾಲೆ ಆಗಿದ್ದರೇ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳೆಲ್ಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರೇನೋ?
ಪುಂಡಾಪೋಕರಿಗಳಿಗೆಲ್ಲ ತಕ್ಕ ಶಾಸ್ತಿ ಕಲಿಸಬೇಕಾದ ಪೊಲೀಸರು ಈ ವಿಚಾರದಲ್ಲಿ ಅದೇಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದಾರೆಂಬುದು ಯಕ್ಷ ಪ್ರಶ್ನೆ ಮೂಡಿಸಿದೆ! ಶೀಘ್ರವೇ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಲು ಮುಂದಾಗಬೇಕಿರುವುದು ಪೊಲೀಸರ ಜವಾಬ್ದಾರಿಯಾಗಿದೆ.
ಈಗಾಗಲೇ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ವಿ.ಮರಿರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಪ್ರಭಾಕರ್ ಸೇರಿ ಸ್ಥಳೀಯ ಮುಖಂಡರಾದ ದೀಪಕ್ ಕಠಾರೆ, ಅಂಬಳಿ ರವೀಂದ್ರ ಗೌಡ, ಉಪ್ಪಾರ ಬಾಳಪ್ಪ, ವೀರೇಶ್ ಮಜ್ಗಿ, ಭೇಟಿ ನೀಡಿ ವೀಕ್ಷಿಸಿದ್ದಾರೆ.
