Last Updated on March 2, 2026 by ASHOK UPPAR
ಹೋಳಿ ಉತ್ಸವದಲ್ಲಿ ಬಟ್ಟೆ ಹರಿಯುವ ಅಸಭ್ಯ ವರ್ತನೆ ಸಹಿಸಲ್ಲ, ಒತ್ತಾಯಪೂರ್ವಕವಾಗಿ ಬಣ್ಣ ಎರಚುವಂತಿಲ್ಲ : ಸಿಪಿಐ ವಿಕಾಸ್ ಲಮಾಣಿ ಖಡಕ್ ಎಚ್ಚರಿಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಮಾ.3 ರಂದು ಪಟ್ಟಣದಲ್ಲಿ ನಡೆಯಲಿರುವ ಹೋಳಿ ಉತ್ಸವ ಆಚರಣೆಯಲ್ಲಿ ಯುವಕರು ಬಟ್ಟೆ ಹರಿಯುವ ಅಸಭ್ಯ ವರ್ತನೆ ಸೇರಿ ಒತ್ತಾಯಪೂರ್ವಕವಾಗಿ ಯಾರೋಬ್ಬರಿಗೂ ಬಣ್ಣ ಎರಚುವಂತಿಲ್ಲ ಎಂದು ಸಿಪಿಐ ವಿಕಾಸ್ ಲಮಾಣಿ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಭಾನುವಾರ ಸಂಜೆ ಮಾತನಾಡಿದರು. ಕಳೆದ 8 ವರ್ಷಗಳಿಂದ ಪಟ್ಟಣದಲ್ಲಿ ಕಲರ್ಸ್ ವಿತ್ ಕಾರಂಜಿ ಗ್ರೂಪ್ ಗೆಳೆಯರ ಬಳಗದಿಂದ ಹೋಳಿ ಹಬ್ಬದ ಆಚರಣೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇದರಿಂದ ಹೋಳಿ ಹಬ್ಬದ ದಿನ ಬಣ್ಣದೋಕುಳಿ ಶಾಂತಿಯುತ ಆಚರಣೆ ಆಗುತ್ತಿದೆ. ಪ್ರತಿ ವರ್ಷದಂತೆ ಆಯೋಜಕರು ಬೆ.8:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಆಚರಣೆ ಬದ್ಧರಾಗಿರಬೇಕು. ಈಗ ಪಿಯುಸಿ ಪರೀಕ್ಷೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳಿಗೆ ತೊಂದರೆ ಆಗದಂತೆ ಯಾರಿಗೂ ಒತ್ತಾಯಪೂರ್ವಕವಾಗಿ ಬಣ್ಣ ಎರಚುವಂತಿಲ್ಲ ಅಂತಹ ಘಟನೆಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಪಿಎಸ್ಐ ಬಸವರಾಜ್ ಅಡವಿಬಾವಿ ಮಾತನಾಡಿ, ಪ್ರತಿ ವರ್ಷ ಯಾವುದೇ ಅಹಿತಕರ ಘಟನೆಗಳು ನಡೆಯದೇ ಯಶಸ್ವಿಯಾಗಿ ನಡೆಯುತ್ತದೆ. ಕೆಲವರು ಬಣ್ಣದ ಆಟದಲ್ಲಿ ಮೊಟ್ಟೆ ಎಸೆಯುವುದು, ಕೀಲೆಣ್ಣೆ, ಗ್ರೀಸ್ ಸೇರಿ ರಸಾಯನಿಕ ವಸ್ತುಗಳ ಬಳಕೆ ಮಾಡದಂತೆ ಸಂಭ್ರಮದಿಂದ ಆಚರಿಸಿ. ಕಲರ್ಸ್ ವಿತ್ ಕಾರಂಜಿಯಲ್ಲಿ ಯುವಕರು ಮನೋರಂಜನಾತ್ಮಕವಾಗಿ ಹಾಡು, ಡ್ಯಾನ್ಸ್ ಮಾಡುವ ಮೂಲಕ ಖುಷಿಯಿಂದ ಆಚರಿಸಿ ಸಂಭ್ರಮಿಸಿ. ಇಲ್ಲಿ ಪೊಲೀಸರಿಗಿಂತ ನಿಮಗೂ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದು ನೆನಪಿರಲಿ. ಬಣ್ಣ ಆಡುವ ಪ್ರತಿಯೊಬ್ಬರೂ ನೀವೇ ಸ್ವತಃ ಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್ಐ ಎಂದು ಭಾವಿಸಿ ಜವಾಬ್ದಾರಿಯುತವಾಗಿ ಹೋಳಿ ಹಬ್ಬ ಆಚರಿಸಬೇಕಿದೆ ಎಂದರು.

ಕಲರ್ಸ್ ವಿತ್ ಕಾರಂಜಿ ಬಳಗದ ಪ್ರಮುಖರಾದ ಸಂದೀಪ್ ಶಿವಮೊಗ್ಗ ಮಾತನಾಡಿ. ಕಳೆದ 8 ವರ್ಷದಿಂದ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಮಾರ್ಗದರ್ಶನ ಸೇರಿ ಪಟ್ಟಣದ ಎಲ್ಲಾ ಸಾರ್ವಜನಿಕರು, ಯುವಕರ ಸಹಕಾರದಿಂದ ಯಶಸ್ವಿಗೊಳಿಸಿ, ಇದೀಗ 9 ನೇ ವರ್ಷ ಆಚರಣೆಗೆ ಸಕಲ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೋಳಿ ಹಬ್ಬದ ದಿನದಂದು ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು, ಅಪಘಾತ ಪ್ರಕರಣಗಳು ಮತ್ತು ಸಾವು ನೋವುಗಳು ಸಂಭವಿಸದಿರಲು ಈ ಕಲರ್ಸ್ ವಿತ್ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಪೋಷಕರ ಜತೆಗೆ ಬಂದು ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಇವರೆಲ್ಲರ ಸುರಕ್ಷತೆ ನಿರ್ವಹಣೆ ನಮಗೆ ಮೊದಲನೇ ಆದ್ಯತೆಯಾಗಿದೆ. ಅಗತ್ಯತೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಪೊಲೀಸ್ ಇಲಾಖೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಸಭೆಯಲ್ಲಿ ಸೋಡಾದ್ ನಿಂಬಣ್ಣ, ಹಿರಿಯ ಪತ್ರಕರ್ತ ಹುಳ್ಳಿ ಪ್ರಕಾಶ್, ಸೆರೆಗಾರ್ ಹುಚ್ಚಪ್ಪ, ಸೊನ್ನದ್ ಗುರುಬಸವರಾಜ್ ಮಾತನಾಡಿ ಕೆಲವು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಕಲರ್ಸ್ ವಿತ್ ಕಾರಂಜಿ ಬಳಗದ ಪ್ರಮುಖರಾದ ಅಶೋಕ್ ಉಪ್ಪಾರ, ಸಂತೋಷ ಪೂಜಾರ್, ವೀರೇಂದ್ರ ಉತ್ತಂಗಿ, ಶಂಭು, ಶಿವಕುಮಾರ್, ಸ್ಥಳೀಯ ಮುಖಂಡರಾದ ಚಿಂತ್ರಪಳ್ಳಿ ದೇವೇಂದ್ರಪ್ಪ, ಎಚ್.ಎಂ.ವಿಜಯಕುಮಾರ್, ನಾಣಿಕೇರಿ ಭರಮಜ್ಜ ನಾಯಕ, ಅಂಬಾಡಿ ಮಹೇಶ್ ಸೇರಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಇದ್ದರು.
