ಹಂಪಿ ಉತ್ಸವದ ಸಂಭ್ರಮ : ಬಣ್ಣ ಬಣ್ಣದ ಗಾಳಿಪಟ ಹಬ್ಬಕ್ಕೆ ಅದ್ಧೂರಿ ಚಾಲನೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ.
ಐತಿಹಾಸಿಕ ವಿಜಯನಗರದ ವೈಭವವನ್ನು ಸಾರುವ ‘ಹಂಪಿ ಉತ್ಸವ – 2026’ ರ ಅಂಗವಾಗಿ ಹೊಸಪೇಟೆ ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ ಶನಿವಾರ ಗಾಳಿಪಟ ಉತ್ಸವಕ್ಕೆ ಶಾಸಕ ಹೆಚ್.ಆರ್.ಗವಿಯಪ್ಪ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಆಡಳಿತದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಂಜಾನೆಯಿಂದಲೇ ಮೈದಾನದಲ್ಲಿ ನೂರಾರು ಗಾಳಿಪಟ ಪ್ರೇಮಿಗಳು ಜಮಾಯಿಸಿದ್ದು, ಆಕಾಶದಲ್ಲಿ ವಿವಿಧ ವಿನ್ಯಾಸದ ಹಾಗೂ ಬಣ್ಣ ಬಣ್ಣದ ಗಾಳಿಪಟಗಳು ಪೈಪೋಟಿಗೆ ಬಿದ್ದಂತೆ ಹಾರಾಡುತ್ತಿವೆ. ಮೈದಾನದಲ್ಲಿ ಜಮಾಯಿಸಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಆಕಾಶದಲ್ಲಿ ತೇಲುತ್ತಿದ್ದ ಬೃಹತ್ ಗಾಳಿಪಟಗಳನ್ನು ನೋಡಿ ಸಂಭ್ರಮಿಸಿದರು. ನೀಲಿ ಬಾನಂಗಳದಲ್ಲಿ ಕುದುರೆಯ ಆಕಾರದ ಬೃಹತ್ ಗಾಳಿಪಟವು ಗಾಳಿಯಲ್ಲಿ ಜಿಗಿಯುತ್ತಿದ್ದರೆ, ವಿಜಯನಗರದ ಅಶ್ವದಳವೇ ಆಕಾಶದಲ್ಲಿ ಸಾಗುತ್ತಿದ್ದಂತೆ ಭಾಸವಾಯಿತು.
ತ್ರಿವರ್ಣದ ಮೆರುಗು‘: ವಸುದೈವ ಕುಟುಂಬಂ’ ಸಂದೇಶ ಹೊತ್ತ ‘ಐ ಲವ್ ಮೈ ಇಂಡಿಯಾ’ ಬರಹದ ತ್ರಿವರ್ಣ ಗಾಳಿಪಟಗಳು ಹಾಗೂ ಸಮುದ್ರದ ಆಕ್ಟೋಪಸ್ ಮಾದರಿಯ ಗಾಳಿಪಟಗಳು ವಿಶೇಷವಾಗಿ ಮಕ್ಕಳನ್ನು ರಂಜಿಸಿದವು. ಯಾವುದೇ ಚೌಕಟ್ಟು ಇಲ್ಲದ ‘ಪ್ಯಾರಾಫಾಯಿಲ್’ ಮಾದರಿಯ ಈ ಗಾಳಿಪಟಗಳು ಗಾಳಿಯ ತೀವ್ರತೆಗೆ ತಕ್ಕಂತೆ ಆಕಾರ ಬದಲಿಸುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದವು.
ಕಿಕ್ಕಿರಿದ ಜನಸ್ತೋಮ : ರಜಾ ದಿನವಾದ ಕಾರಣ ಕಾಲೇಜು ಮೈದಾನವು ಜನಜಂಗುಳಿಯಿಂದ ತುಂಬಿತ್ತು. ಯುವಕರು ಶಿಳ್ಳೆ ಹೊಡೆಯುತ್ತಾ ಗಾಳಿಪಟಗಳ ಹಾರಾಟಕ್ಕೆ ಸಾಕ್ಷಿಯಾದರೆ, ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಈ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಪೈಪೋಟಿ ನಡೆಸುತ್ತಿದ್ದರು. ಬಣ್ಣ ಬಣ್ಣದ ಗಾಳಿಪಟಗಳು ತುಂಗಭದ್ರೆಯ ನಾಡಿನ ಬಾನಿನಲ್ಲಿ ಚಿತ್ತಾರ ಮೂಡಿಸಿದ್ದವು.

ಬೆಂಗಳೂರಿನ ಕೈಟ್ ಕ್ಲಬ್, ಪಂಜಾಬ್,ಗುಜರಾತ್, ಓರಿಸ್ಸಾ ಆಂದ್ರಪ್ರದೇಶ, ಗಾಳಿಪಟ ಪಟುಗಳು ಹಾರಿಸಿದ ಬೃಹತ್ ಆಕೃತಿಗಳು ಈ ಬಾರಿಯ ಗಾಳಿಪಟ ಉತ್ಸವದ ವಿಶೇಷವಾಗಿದ್ದವು. ಹತ್ತಾರು ಅಡಿ ಉದ್ದದ ಕೆಂಪು ಬಣ್ಣದ ಆಕ್ಟೋಪಸ್, ಆಕಾಶದಲ್ಲಿ ಜಿಗಿಯುತ್ತಿರುವಂತೆ ಭಾಸವಾಗುತ್ತಿದ್ದ ಚಿರತೆ ಹಾಗೂ ಮಂಗನ ಗಾಳಿಪಟಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿದವು

ವಿಶೇಷವಾಗಿ, ‘I ❤️ HAMPI’ ಎಂಬ ಬರಹವಿದ್ದ ಗಾಳಿಪಟವು ಹಂಪಿಯ ಪರಂಪರೆಯ ಮೇಲಿರುವ ಗೌರವವನ್ನು ಸಾರುತ್ತಿದ್ದರೆ, ‘BHARAT’ ಎಂದು ಬರೆದಿದ್ದ ತ್ರಿವರ್ಣ ಗಾಳಿಪಟವು ಆಕಾಶದಲ್ಲಿ ಹಾರುವಾಗ ನೆರೆದಿದ್ದ ಜನರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿತು. ನೆರೆದಿದ್ದ ವಿದ್ಯಾರ್ಥಿಗಳು, ಬೃಹತ್ ಗಾಳಿಪಟಗಳು ಹಾರಾಡುವಾಗ ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು. ಪ್ರವಾಸಿಗರು ಈ ವಿಶಿಷ್ಟ ಕ್ಷಣಗಳನ್ನು ತಮ್ಮ ಕ್ಯಾಮೆರಾ ಹಾಗೂ ಮೊಬೈಲ್ಗಳಲ್ಲಿ ಸೆರೆಹಿಡಿಯಲು ಮುಗಿಬಿದ್ದಿದ್ದರು.

ಗಾಳಿಪಟ ಉತ್ಸವದ ಚಾಲನೆ ವೇಳೆ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಉಪವಿಭಾಗಾಧಿಕಾರಿ ವಿವೇಕ್,ನಗರಸಭೆಯ ಅಧ್ಯಕ್ಷ ರೂಪೇಶ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರ ಸಭೆ ಆಯುಕ್ತ ಶಿವಕುಮಾರ್, ಬೆಂಗಳೂರಿನ ಕೈಟ್ ಕ್ಲಬ್ನ ವಿ.ಕೆ.ರಾವ್ ಸೇರಿದಂತೆ ಮತ್ತಿತರು ಇದ್ದರು.

