ಬಾನಂಗಳದಲಿ ಚಿತ್ತಾರ ಮೂಡಿಸಿದ ಡ್ರೋನ್ ಶೋ, ಹಂಪಿ ಉತ್ಸವದಲ್ಲಿ ಗಮನಸೆಳೆದ ಪ್ರದರ್ಶನ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ.
ಹಂಪಿ ಉತ್ಸವದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಅತ್ಯಾಧುನಿಕ ಡ್ರೋನ್ ಶೋ ಉದ್ಘಾಟನಾ ಸಮಾರಂಭದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ವಿಜಯನಗರದ ಗತವೈಭವವನ್ನು ಬಾನಂಗಳದಲ್ಲಿ ಅನಾವರಣಗೊಳಿಸಿತು. ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಈ ಅಪೂರ್ವ ಸಂಗಮವು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ನೂರಾರು ಡ್ರೋನ್ಗಳು ಆಕಾಶದಲ್ಲಿ ಹಂಪಿಯ ಪ್ರಸಿದ್ಧ ಕಲ್ಲಿನ ರಥ, ಭವ್ಯವಾದ ವಿರೂಪಾಕ್ಷ ದೇವಾಲಯ ಮತ್ತು ಬಡವಿ ಲಿಂಗ ಹಾಗೂ ಉಗ್ರ ನರಸಿಂಹನ ಮೂರ್ತಿಗಳನ್ನು ಕಲಾತ್ಮಕವಾಗಿ ಬಿಂಬಿಸಿದವು. ವಿಜಯನಗರ ಸಾಮ್ರಾಜ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪ್ರತಿಮ ವೀರ, ಕನ್ನಡಿಗರ ಹೆಮ್ಮೆಯ ಸಾಮ್ರಾಟ ಶ್ರೀಕೃಷ್ಣದೇವರಾಯರ ಭಾವಚಿತ್ರವು ಆಕಾಶದಲ್ಲಿ ಮೂಡಿಬಂದಾಗ ಜನರಿಂದ ಹರ್ಷೋದ್ಗಾರ ವ್ಯಕ್ತವಾಯಿತು. ಇದರೊಂದಿಗೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಹಂಪಿಯ ದರೋಜಿ ಕರಡಿಧಾಮ ಚಿತ್ರಣಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.
ಪ್ರದರ್ಶನವು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಗ್ಯಾರಂಟಿ ಯೋಜನೆಗಳ ಸರದಾರನೆಂದು ಬಣ್ಣಿಸಲಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಡ್ರೋನ್ ಮೂಲಕ ಬಾನಂಗಳದಲ್ಲಿ ಚಿತ್ರಿಸಿ ಗೌರವ ಸಲ್ಲಿಸಲಾಯಿತು.

ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ, ವಸತಿ ಸಚಿವ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್, ಶಾಸಕ ಹೆಚ್.ಆರ್.ಗವಿಯಪ್ಪ, ನಟ ದಿವಂಗತ ಪುನೀತ್ರಾಜ್ ಕುಮಾರ್ ಚಿತ್ರಗಳು ಡ್ರೋನ್ ಸಂಯೋಜನೆಯಲ್ಲಿ ಮೂಡಿಬಂದವು. ಈ ವರ್ಣರಂಜಿತ ಡ್ರೋನ್ ಶೋ ಪ್ರದರ್ಶನವು ಹಂಪಿಯ ಸಾಂಸ್ಕೃತಿಕ ಹಿರಿಮೆಗೆ ಹೊಸ ಆಯಾಮವನ್ನು ನೀಡುವಲ್ಲಿ ಯಶಸ್ವಿಯಾಯಿತು. ಎ.ಐ.ಆರ್. ಪಿಕ್ಸಲ್ ಕಂಪನಿಯ ತಂತ್ರಜ್ಞರು ಡ್ರೋನ್ಗಳ ಸಂಯೋಜನೆಯ ನಿರ್ವಹಣೆ ಮಾಡಿದರು. ಉತ್ಸವದ ಮೂರು ದಿನಗಳ ಕಾಲವೂ ಡ್ರೋನ್ ಶೋ ನಡೆಯಲಿದೆ.

