ಹಂಪಿ ಉತ್ಸವ : ದಣಿವರಿಯದ ರೈತಮಿತ್ರ ಎತ್ತುಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ. ಹಳ್ಳಿಕಾರ ತಳಿಗೆ ಪ್ರಥಮ ಬಹುಮಾನದ ಗರಿ.

ಹಂಪಿ ಉತ್ಸವ: ದಣಿವರಿಯದ ರೈತಮಿತ್ರ ಎತ್ತುಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ
180ಕ್ಕೂ ಹೆಚ್ಚಿನ ಜೋಡೆತ್ತುಗಳು ಭಾಗಿ : ಹಳ್ಳಿಕಾರ ತಳಿಗೆ ಪ್ರಥಮ ಬಹುಮಾನದ ಗರಿ
ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ಅ ವರಿಂದ ವೈಯಕ್ತಿಕ ರೂ.2 ಲಕ್ಷ ಬಹುಮಾನ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ನೇಗಿಲ ನೊಗದ ಭಾರ ಹೊತ್ತು, ಹೊಲದಲ್ಲಿ ನೇರ ಸಾಲಿನಲ್ಲಿ ರೈತನೊಂದಿಗೆ ಹೆಜ್ಜೆ ಹಾಕುತ್ತಾ, ಬಿತ್ತನೆಗೆ ಭೂಮಿ ಹದಗೊಳಿಸುವ ಜೋಡೆತ್ತುಗಳು ಶುಕ್ರವಾರ ಹಂಪಿಯ ಕಡೆಗೆ ಮುಖ ಮಾಡಿದ್ದವು. ಮುಂಜಾನೆ 5 ಗಂಟೆಗೆ ಎದ್ದು ತಮ್ಮ ಎತ್ತುಗಳನ್ನು ಸಿಂಗರಿಸಿ ರೈತರು ಹಂಪಿ ಉತ್ಸವದ ಜೋಡೆತ್ತುಗಳ ಸ್ಪರ್ಧೆಗೆ ಆಗಮಿಸಿದ್ದರು. ಸಂಘಟಕರ ನಿರೀಕ್ಷೆಗೂ ಮೀರಿ ಜೋಡೆತ್ತುಗಳ ಸ್ಪರ್ಧೆಗೆ ಸ್ಪಂದನೆ ದೊರೆತಿದ್ದು, 180 ಅಧಿಕ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎತ್ತುಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಜೋಡೆತ್ತುಗಳಿಗೆ ಪೂಜೆ ಸಲ್ಲಿಸವ ಮೂಲಕ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಪ್ರದರ್ಶನ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಪೇಟೆ ರೈತ ಮಂಜುನಾಥ್.ಆರ್ ಅವರ ಹಳ್ಳಿಕಾರ ತಳಿಯ ಜೋಡೆತ್ತುಗಳು ರೂ.10,000 ಹಾಗೂ ಪ್ರಮಾಣ ಪತ್ರ ಪಡೆದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವು. ಗಾದಿನಗನೂರು ಗ್ರಾಮದ ಬಿ.ಬಸವ ಅವರ ಜೋಡು ಎತ್ತುಗಳು ದ್ವೀತಿಯ ಸ್ಥಾನ ಗಳಿಸುವ ಮೂಲಕ ರೂ.7,500 ಹಾಗೂ ಪ್ರಮಾಣ ಪತ್ರ ಪಡೆದುಕೊಂಡವು. ಇನ್ನೋರ್ವ ಬಾಳಾಪುರದ ರೈತ ಶಂಕರಪ್ಪನವರ ಎತ್ತುಗಳು ತೃತೀಯ ಸ್ಥಾನ ಪಡೆದು, ರೂ.5,500 ಹಾಗೂ ಪ್ರಮಾಣ ಪತ್ರ ಗಿಟ್ಟಿಸಿಕೊಂಡವು. ಹೊಸಪೇಟೆ ಮಹಮದ್ ಹುಸೇನ್ ಅವರ ಜೋಡೆತ್ತುಗಳು ರೂ.2500 ಪಡೆದುಕೊಂಡು ನಾಲ್ಕನೇ ಸ್ಥಾನ ಪಡೆದುಕೊಂಡವು. ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಪ್ರಶಸ್ತಿಗೆ ಭಾಜನವಾದ ನಾಲ್ಕು ಜೊತೆ ಜೊಡೆತ್ತುಗಳಿಗೆ ವೈಯುಕ್ತಿಕವಾಗಿ ರೂ.2 ಲಕ್ಷ ನಗದು ಬಹುಮಾನವನ್ನು ನೀಡಿದರು.
ಕಲಮಾಪುರ, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ 180ಕ್ಕೂ ಹೆಚ್ಚಿನ ಜೋಡೆತ್ತುಗಳು ಉತ್ಸವದಲ್ಲಿ ಭಾಗವಹಿಸಿವೆ. ಹಳ್ಳಿಕಾರ್, ಮಲೆನಾಡ ಗಿಡ್ಡ, ಓಂಗೋಲ್, ಅಮೃತ್‌ಮಹಲ್, ಕಿಲಾರಿ ಜಾತಿ ವಿವಿಧ ದೇಶಿ ಹಾಗೂ ವಿದೇಶಿ ತಳಿಯ ಜೋಡೆತ್ತುಗಳು ತಮ್ಮ ಗಾಂಭೀರ್ಯದಿAದ ನೋಡುಗರನ್ನು ಚಕಿತಗೊಳಿಸಿದವು.
ಬೀದರ್ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೊಟ್ರೇಶ್ ಬಸವರಾಜ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪಶು ವೈದ್ಯರ ತಂಡ ಜೋಡೆತ್ತುಗಳ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಪ್ರದರ್ಶನದಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚಲನವಲನಗಳ, ಹೊಳೆಯುವ ಚರ್ಮ, ಕಣ್ಣು, ವಯಸ್ಸು, ಹಲ್ಲು ಸೇರಿದಂತೆ ರೈತರಿಂದ ಅವುಗಳ ಪೋಷಣೆ ಕ್ರಮವನ್ನು ಪರಿಗಣಿಸಿ ತೀರ್ಪುಗಾರರು ಬಹುಮಾನ ಘೋಷಿಸುವರು. ನಿವೃತ್ತ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ನಿರೂಪಣೆ ಕಾರ್ಯ ನಡೆಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಸಭಾ ಸಂಸದ ತುಕುರಾಂ, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ನಂದಿಪುರ ಮಠದ ಶ್ರೀ.ಮಹೇಶ್ವರ ಸ್ವಾಮೀಜಿ, ಪಶುಪಾಲನೆ ಮತ್ತು ಪಶು ವೈದ್ಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ.ಎಂ.ರವಿ, ಸಹಾಯ ನಿರ್ದೇಶಕರು ಡಾ.ಇಮ್ರಾನ್, ಡಾ.ಯುಗಂದ್ರರ್ ಮಾನ್ವಿ, ಡಾ.ಪ್ರಶಾಂತ್, ಡಾ.ಅಜಯ್ ಕುಮಾರ್, ಡಾ.ಸುರೇಶ್, ಡಾ.ರಾಘವೇಂದ್ರ, ಡಾ.ಮಲ್ಲಿಕಾರ್ಜುನ್, ಡಾ.ಚಂದ್ರನಾಯ್ಕ್, ಡಾ.ಶಿವಕುಮಾರ್,ಡಾ.ಲೋಹಿತ್, ಡಾ.ಸತೀಶ್, ಡಾ.ನೇಮಿನಾಯ್ಕ್, ಇಲಾಖೆಯ ಸಿಬ್ಬಂದಿ ವರ್ಗದವರು, ರೈತರು, ಸಾರ್ವಜನಿಕರು ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *