ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ಗಮನಸೆಳೆದ ಹಂಪಿಯ ತುಂಗಾರತಿ.
ವಿದೇಶಿಗರಿಂದ ವಿಶ್ವ ಪಾರಂಪರಿಕ ತಾಣದ ಮೆಚ್ಚುಗೆ : ಸಚಿವ ಜಮೀರ್ ಅಹ್ಮದ್ ಖಾನ್
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).
ಹಂಪೆಯ ಶ್ರೀವಿರೂಪಾಕ್ಷ ದೇವಾಲಯ ಪಕ್ಕದಲ್ಲಿರುವ ಪವಿತ್ರ ತುಂಗಭದ್ರಾ ನದಿಗೆ ಗೌರವ ಸಮರ್ಪಣೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಂಪಿ ಉತ್ಸವದ ನಿಮಿತ್ತ ತುಂಗಾರತಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಹಂಪೆಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರವಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಬಳಿ ಬುಧವಾರ ಸಂಜೆ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿತ್ತು.
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮರುಕಳಿಸುವಂತೆ ಮಾಡುವುದು ಮತ್ತು ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶವು ಇದಾಗಿದೆ. ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ, ಮಾಜಿ ಶಾಸಕರು, ಅಧಿಕಾರಿಗಳು ನದಿಗೆ ಆರತಿ ಬೆಳಗಿದರು. ನದಿಯ ನೀರಿನಲ್ಲಿ ಪ್ರತಿಫಲಿಸುವ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದವು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸಿತು.
ಹಂಪಿ ಉತ್ಸವದ ಸಮಯದಲ್ಲಿ ಈ ತುಂಗಾರತಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಸಾವಿರಾರು ಪ್ರವಾಸಿಗರು ಈ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
ತುಂಗಾರತಿಯಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸತತವಾಗಿ ಮೂರನೇ ಹಂಪಿ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ವಿಶೇಷವಾಗಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಹಲವು ವಿದೇಶಿಗರು ಇಂತಹ ಸ್ಥಳ ಹಾಗೂ ಉತ್ಸವ ನೋಡಲು ಸಾಧ್ಯವಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಎಷ್ಟೊಂದು ಸುಂದರ ಹಂಪಿ, ಬಂದು ಕಣ್ತುಂಬಿಕೊಳ್ಳಿ ಎಂದರು.


ಮಾಜಿ ಶಾಸಕ ಭೀಮಾನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿಇಓ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಎಸ್.ಪಿ ಎಸ್.ಜಾಹ್ನವಿ, ಎಸಿ ವಿವೇಕಾನಂದ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

